ಬೆಂಗಳೂರು: ಮಹಾರಾಷ್ಟ್ರ ಸರ್ಕಾರ ರಾಜ್ಯದ ಸಚಿವರಿಗೆ ಅವಮಾನ ಮಾಡ್ತಿದೆ. 2 ಗಂಟೆಗಳ ಕಾಲ ಒಬ್ಬ ಸಚಿವರನ್ನು ಗೇಟ್ ಬಳಿ ಕಾಯಿಸುವುದು ಎಷ್ಟು ಸರಿ ಎಂದು ಜೆಡಿಎಸ್ನ ಎನ್.ಹೆಚ್ ಕೋನರೆಡ್ಡಿ ಕಿಡಿಕಾರಿದ್ರು.
ದೇವನಹಳ್ಳಿಯಲ್ಲಿರುವ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಯಾವುದೇ ರಾಜ್ಯದ ಅತಿಥಿ ಬರಲಿ ಆತಿಥ್ಯ ನೀಡಬೇಕು. ಮಹಾರಾಷ್ಟ್ರದ ಸಚಿವರು ಬಂದ್ರೆ ಪ್ರೊಟೋಕಾಲ್ ಪ್ರಕಾರ ನಾವು ಗೌರವ ನೀಡುತ್ತೇವೆ. ನಮ್ಮ ರಾಜ್ಯದ ಹಿರಿಯ ಸಚಿವರು ಡಿ.ಕೆ ಶಿವಕುಮಾರ್, ಜಿ.ಟಿ ದೇವೇಗೌಡ ಮುಂಬೈಗೆ ತೆರಳಿದ್ದಾರೆ. ಆದರೆ ಅವರಿಗೆ ಯಾವುದೇ ರೀತಿ ಗೌರವ ನೀಡುತ್ತಿಲ್ಲ. ನಮ್ಮ ರಾಜ್ಯದ ರಾಜಕಾರಣ ನೋಡುತ್ತಿದ್ದರೆ ಪ್ರಜಾಪ್ರಭುತ್ವದ ಕೊಲೆ ಆಗಿದೆ ಅನ್ನಿಸುತ್ತಿದೆ ಎಂದರು.
ಹೋಟೆಲ್ನಲ್ಲಿ ರೂಂ ಬುಕ್ ಮಾಡಿದ್ರೂ, ಹೊರಗಡೆ ನಿಲ್ಲಿಸಿರುವುದು ರಾಜ್ಯಕ್ಕೆ ಅವಮಾನ ಮಾಡಿದ ಹಾಗೆ. ಇಂತಹ ವ್ಯವಸ್ಥೆ ನೋಡುತ್ತಿರುವುದು ಇದೇ ಮೊದಲ ಬಾರಿ. ಇದು ಒಳ್ಳೆಯ ಬೆಳೆವಣಿಗೆ ಅಲ್ಲ, ಪ್ರಜಾಪ್ರಭುತ್ವ ಉಳಿಯಬೇಕು. ಇಂತಹ ವ್ಯವಸ್ಥೆಗೆ ಬಿಜೆಪಿ ಕುಮ್ಮಕ್ಕು ನೀಡುತ್ತಿರುವುದು ಸರಿಯಲ್ಲ. ನಾನು ಯಾವುದೇ ರೀತಿಯ ರಿವರ್ಸ್ ಆಪರೇಷನ್ ಮಾಡ್ತಿಲ್ಲ. ನಮ್ಮ ವರಿಷ್ಠರು ಹೇಳಿರುವುದಕ್ಕಾಗಿ ನಾವು ಎಲ್ಲ ಶಾಸಕರು ಒಂದು ಕಡೆ ಇರಲು ರೆಸಾರ್ಟ್ಗೆ ಬಂದಿದ್ದೀವಿ. ಅವರು ಹೇಳಿದ ಕೂಡಲೇ ಇಲ್ಲಿಂದ ಹೊರಡುತ್ತೇವೆ ಎಂದು ರೆಸಾರ್ಟ್ನಲ್ಲಿರುವ ಕುರಿತು ಪ್ರತಿಕ್ರಿಯೆ ನೀಡಿದ್ರು.