ಬೆಂಗಳೂರು: 'ಮೈತ್ರಿಯಿಂದ ಕಾಂಗ್ರೆಸ್ಗೆ ಹಿನ್ನಡೆಯಾಯಿತು' ಎಂದ ಮಾಜಿ ಸಂಸದ ವೀರಪ್ಪ ಮೊಯ್ಲಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ನಿರಾಕರಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕರೆದಿದ್ದ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಆಯ್ಕೆ, ಮಹಿಳಾ ಸಮಾವೇಶ ಸಂಬಂಧ ಸಭೆಯ ಬಳಿಕ ಮಾತನಾಡಿದ ಅವರು, ಇನ್ನೊಬ್ಬರ ವಿಚಾರ ನನಗೆ ಬೇಕಾಗಿಲ್ಲ. ನಾನಾಯಿತು, ನನ್ನ ಪಕ್ಷ ಆಯ್ತು ಎಂದು ಹೇಳಿದರು.
'ನಾನೇನು ಅವರು ಸರ್ಕಾರ ನಡೆಸೋದು ಬೇಡಾ ಅಂದಿದ್ದೀನಾ. ಸುಮ್ಮನೇ ಅನಾವಶ್ಯಕವಾಗಿ ಏನಾದರೂ ಸೃಷ್ಟಿ ಮಾಡಬೇಡಿ' ಎಂದು ಗರಂ ಆಗಿ ಪ್ರತಿಕ್ರಿಯಿಸಿದರು.
ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡುವ ಜವಾಬ್ದಾರಿ ನನಗೇ ವಹಿಸಿದ್ದಾರೆ.
ಸಭೆಯಲ್ಲಿ ಎಲ್ಲ ಮಹಿಳೆಯರು ಚರ್ಚೆ ಮಾಡಿದ್ದಾರೆ. ಈಗ ನಿರ್ಧಾರ ಹೇಳಿ ಎಂದಿದ್ದಾರೆ. ಅಧ್ಯಕ್ಷರ ನೇಮಕ ಬಗ್ಗೆ ಚರ್ಚೆ ಮಾಡಿ ಅಂತಿಮ ನಿರ್ಣಯ ಮಾಡುತ್ತೇವೆ ಎಂದರು.