ಬೆಂಗಳೂರು: ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯುವುದು ಅನುಮಾನ. 2020ರ ಮೊದಲ ಮೂರು ತಿಂಗಳಲ್ಲಿ ಸರ್ಕಾರ ಉರುಳಲಿದೆ ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಭವಿಷ್ಯ ನುಡಿದಿದ್ದಾರೆ.
ಖಂಡಿತವಾಗಿ ಮಧ್ಯಂತರ ಚುನಾವಣೆ ಎದುರಾಗಲಿದೆ. ಹೈಕಮಾಂಡ್ ಜೊತೆಯೂ ಮಧ್ಯಂತರ ಚುನಾವಣೆ ಬಗ್ಗೆ ಸಿದ್ದರಾಮಯ್ಯ ಚರ್ಚಿಸಿದ್ದಾರೆ. ಆದರೆ, ಅವರು ಕಾಲ ಬರಲಿ ಎಂದು ಕಾಯುತ್ತಿದ್ದಾರೆ. ಮಧ್ಯಂತರ ಚುನಾವಣೆ ನಡೆದರೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಪೂರ್ಣ ಬಹುಮತದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ನಡೆಯಬೇಕೋ ಬೇಡವೋ ಹೈಕಮಾಂಡ್ ನಿರ್ಧರಿಸುತ್ತದೆ. ಸಿದ್ದರಾಮಯ್ಯ ಸಮರ್ಥರಿದ್ದಾರೆ. ಮಾನಸಿಕವಾಗಿ ಬಹುತೇಕ ನಾಯಕರು ಮಧ್ಯಂತರ ಚುನಾವಣೆ ಎದುರಿಸೋಕೆ ಸಿದ್ಧರಾಗಿದ್ದಾರೆ. ಜೊತೆಗೆ ಹೈಕಮಾಂಡ್ ಜೊತೆಗೂ ಕೂಡ ಸಿದ್ದರಾಮಯ್ಯ ಮಧ್ಯಂತರ ಚುನಾವಣೆಗೆ ಸಿದ್ಧರಿರುವುದಾಗಿ ವಾದ ಮಾಡಿದ್ರು. ಈ ಬಗ್ಗೆ ನನಗೆ ಖಚಿತ ಮಾಹಿತಿ ಇದೆ. ಬಹಳಷ್ಡು ಕಾಂಗ್ರೆಸ್ಸಿಗರಿಗೆ ಮಧ್ಯಂತರ ಚುನಾವಣೆಯ ಬಗ್ಗೆ ಹೆಚ್ಚಿನ ಒಲವಿದೆ ಎಂದರು.
ಜೆಡಿಎಸ್ ಜೊತೆ ಮೈತ್ರಿ ಸರಿಯಲ್ಲ:
ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟ ಕೋಳಿವಾಡ, ಮೈತ್ರಿ ಮಾಡಿಕೊಳ್ಳದೇ ಸ್ವತಂತ್ರವಾಗಿರಬೇಕಿತ್ತು. ಆಗ ನಮ್ಮ ಪಕ್ಷ ಮತ್ತಷ್ಟು ಬೆಳೆಯುತ್ತಿತ್ತು. ಜೆಡಿಎಸ್ ಜೊತೆ ಮೈತ್ರಿ ನಮಗೆ ಹೊಂದಿಕೆಯಾಗಲ್ಲ. ವಿರೋಧ ಪಕ್ಷದಲ್ಲಿ ಕುಳಿತರೂ ಉತ್ತಮವೇ. ಮೈತ್ರಿಯಿಂದಾಗಿಯೇ ನಾವು ಲೋಕ ಚುನಾವಣೆಯಲ್ಲಿ ಸೋಲಬೇಕಾಯ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.