ಬೆಂಗಳೂರು: ಮೈತ್ರಿ ಸರ್ಕಾರ ಅಳಿವು-ಉಳಿವಿನ ಗೊಂದಲದಲ್ಲಿರುವ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಮುಂಬೈನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಅಜಾದ್ ಬೆಂಗಳೂರಿಗೆ ಆಗಮಿಸಿದ್ದಾರೆ.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಈಗಲೇ ಏನು ಹೇಳುವುದಿಲ್ಲ. ಆದರೆ ಸರ್ಕಾರವನ್ನು ನಿಜವಾಗಲೂ ಉಳಿಸಿಕೊಳ್ಳುತ್ತೇವೆ. ಎಲ್ಲಾ ಶಾಸಕರು ತಪ್ಪದೇ ವಾಪಸ್ ಬರುತ್ತಾರೆ ಎಂದು ಗುಲಾಂ ನಬಿ ಅಜಾದ್ ವಿಶ್ವಾಸ ವ್ಯಕ್ತಪಡಿಸಿದರು. ಈಗ ತಾನೇ ಬೆಂಗಳೂರಿಗೆ ಬಂದಿದ್ದೇನೆ. ಸದ್ಯದ ಬೆಳವಣಿಗೆಗಳ ಬಗ್ಗೆ ನನಗೆ ಗೊತ್ತಿಲ್ಲ ಎಂದರು. ಇನ್ನು ಪರಿಸ್ಥಿತಿ ಔಟ್ ಆಫ್ ಕಂಟ್ರೋಲ್ ವಿಷಯಕ್ಕೆ ಉತ್ತರಿಸಿದ ಗುಲಾಂ ನಬಿ ಆಜಾದ್, ಏನೂ ಆಗಿಲ್ಲ. ಎಲ್ಲವೂ ಸರಿಹೋಗುತ್ತೆ ಎಂದು ಹೇಳಿದರು.
ಬೆಂಗಳೂರಿಗೆ ಆಗಮಿಸಿರುವ ನಾಯಕರು, ಮುಂದಿನ ಬೆಳವಣಿಗೆಗಳ ಕುರಿತು ಕಾಂಗ್ರೆಸ್-ಜೆಡಿಎಸ್ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಯಲಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ರಾಜ್ಯ ನಾಯಕರು ಭಾಗಿಯಾಗಲಿದ್ದಾರೆ.
ಮೈತ್ರಿ ಸರ್ಕಾರ ರಚನೆಯಾಗುವಾಗ ಪ್ರಮುಖ ಪಾತ್ರ ವಹಿಸಿದ್ದ ಗುಲಾಂ ನಬಿ ಅಜಾದ್ ಈ ಬಾರಿ ಕೊಂಚ ತಡವಾಗಿ ಆಗಮಿಸಿದ್ದಾರೆ. ಅಜಾದ್ ಅವರ ಆಗಮನ ಪಕ್ಷದ ನಾಯಕರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ವಿಶೇಷವಾಗಿ ಈ ಇಬ್ಬರು ನಾಯಕರು ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ರೋಷನ್ ಬೇಗ್ ಅವರ ರಾಜಕೀಯ ಹಿತೈಷಿಗಳಾಗಿದ್ದು, ರಾಜೀನಾಮೆ ನೀಡಿರುವ ಇಬ್ಬರು ಶಾಸಕರ ಮನವೊಲಿಸುವ ಯತ್ನ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.