ಬೆಂಗಳೂರು: ನಗರದಲ್ಲಿ ಇತ್ತೀಚಿಗೆ ನಡೆದ ವಾಲ್ಮಿಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಹೋರಾಟದಲ್ಲಿ ಪ್ರಸನ್ನಾನಂದ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಟೀಕಿಸುವ ಭರದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಇಂದು ಅವರ ವಿರುದ್ಧ ವಕೀಲ ಅಮೃತೇಶ್ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಾಲ್ಮೀಕಿ ಸಮುದಾಯ ಮೀಸಲಾತಿಯಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಹೋರಾಟ ಮಾಡಲಾಯಿತು. ಈ ವೇಳೆ ರಾಜನಹಳ್ಳಿ ಮಠದ ಪ್ರಸನ್ನಾನಂದ ಸ್ವಾಮೀಜಿ ಅವರು ಸರ್ಕಾರವನ್ನು ಟೀಕಿಸುವ ಭರದಲ್ಲಿ ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಸಮುದಾಯದ ಎಲ್ಲ ಶಾಸಕರು ರಾಜೀನಾಮೆ ನೀಡಿದರೆ ಸರ್ಕಾರಕ್ಕೆ ಬುದ್ಧಿ ಬರುತ್ತದೆ. ಮುಖ್ಯಮಂತ್ರಿ ಮಾತ್ರವಲ್ಲ ಅವರ ಅಪ್ಪನೂ ನಮ್ಮ ಮಾತು ಕೇಳುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು ಎಂದು ಅವರು ಆರೋಪಿಸಿದ್ದಾರೆ.
ವಿಧಾನಸೌಧದ ಸುತ್ತಮುತ್ತ ಪ್ರತಿಭಟನೆ ಮಾಡಲು ಅವಕಾಶ ಇಲ್ಲದಿದ್ದರೂ ಅಲ್ಲಿನ ದೇವರಾಜ ಅರಸು ಪ್ರತಿಮೆ ಎದುರಿನ ಗೇಟ್ನಲ್ಲಿ ಪ್ರತಿಭಟನೆ ನಡೆಸಿದ್ದರು. ಯಾವುದೇ ಸಮುದಾಯದ ಸ್ವಾಮೀಜಿಗಳು ಅಥವಾ ಗುರುಗಳು ಮಾತನಾಡುವಾಗ ನೋಡಿಕೊಂಡು ಮಾತನಾಡಬೇಕು. ಒಂದು ಜಾತಿಯ ಪರವಾಗಿ ಮಾತನಾಡುವ ಭರದಲ್ಲಿ ಸ್ವಾಮೀಜಿ ಮುಖ್ಯಮಂತ್ರಿ ವಿರುದ್ಧ ಮಾತನಾಡಿರುವುದು ತಪ್ಪು. ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕು ಎಂದು ಅಮೃತೇಶ್ ದೂರಿನಲ್ಲಿ ಆಗ್ರಹಿಸಿದ್ದಾರೆ.