ಬೆಂಗಳೂರು: ದಾವಣಗೆರೆ ಮತ್ತು ಹರಿಹರದ ಮಂಡಕ್ಕಿ ಭಟ್ಟಿಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಪರ್ಯಾಯ ಜಾಗ ಗುರುತಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, 15 ದಿನಗಳೊಳಗೆ ವರದಿ ಸಲ್ಲಿಸಲು ತಿಳಿಸಲಾಗಿದೆ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವರದಿ ಸಲ್ಲಿಸಲು ತಿಳಿಸಲಾಗಿದೆ. ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ, ಶಾಸಕರಾದ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ದಾವಣಗೆರೆ, ಹರಿಹರ ಭಾಗಗಳಲ್ಲಿ ಸಹಸ್ರಾರು ಮಂದಿ ಮಂಡಕ್ಕಿ ಭಟ್ಟಿಗಳನ್ನೇ ಅವಲಂಭಿಸಿ ಬದುಕು ಸಾಗಿಸುತ್ತಿದ್ದಾರೆ. ಕಡುಬಡತನದಲ್ಲಿರುವ ಅವರಿಗೆ ಸೂಕ್ತ ನೆಲೆ ಇರುವುದಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡು ಅವರಿಗೆ ಸೂಕ್ತ ಪರ್ಯಾಯ ನೆಲೆ ಒದಗಿಸಬೇಕೆಂದು ಸಭೆಯಲ್ಲಿ ಭಾಗವಹಿಸಿದ್ದವರು ಮುಖ್ಯಮಂತ್ರಿಗೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಸಿಎಂ, 15 ದಿನಗಳ ಒಳಗಾಗಿ ಸ್ಥಳ ಗುರುತಿಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗೆ ಸೂಚಿಸಿ, ಇದಕ್ಕೆ ಪೂರಕವಾಗಿ ಸ್ಥಳೀಯ ಶಾಸಕರನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ತಿಳಿಸಿದರು.