ಬೆಂಗಳೂರು: ಬಿಜೆಪಿಯ ಆಪರೇಷನ್ ಕಮಲ ಪ್ರಯತ್ನಕ್ಕೆ ಪ್ರತಿಯಾಗಿ ಆಪರೇಶನ್‌ಗೆ ಕಾಂಗ್ರೆಸ್-ಜೆಡಿಎಸ್ಗೆ ಮೈತ್ರಿ ಸರ್ಕಾರ ಮುಂದಾಗಿದ್ದು, ಸರ್ಕಾರ ಉರುಳಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನಕ್ಕೆ ಕಡಿವಾಣ ಹಾಕಲು ಮೈತ್ರಿ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕಳೆದ ನಾಲ್ಕು ದಿನದಲ್ಲಿ ಎರಡನೇ ಸಾರಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಭೇಟಿ ಮಾಡಿ ಇದೇ ವಿಚಾರವಾಗಿ ಚರ್ಚಿಸಿದ್ದು, ಕಾಂಗ್ರೆಸ್ ಶಾಸಕರನ್ನ ಸೆಳೆಯೋ ಯತ್ನಕ್ಕೆ ಬಿಜೆಪಿ ಕೈ ಹಾಕಿದ್ರೆ, ಬಿಜೆಪಿ ಶಾಸಕರಿಗೆ ಆಪರೇಶನ್ ಮಾಡಲು ಕೈ ಪಡೆ ತೀರ್ಮಾನ ಕೈಗೊಂಡಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಹೆಚ್ ಡಿ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ನಡುವೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಯಾವುದೇ ಕಾರಣಕ್ಕೂ ಆಪರೇಶನ್ ಕಮಲ ಆಗಲು ಬಿಡಬಾರದು ಎಂದು ಇವರು ಸಂಕಲ್ಪ ತೊಟ್ಟಿದ್ದಾರೆ ಎಂಬ ಮಾಹಿತಿ ಇದೆ.
ಯಾರಿಗೆ ಗಾಳ?
ಸದ್ಯ ಕಾಂಗ್ರೆಸ್-ಜೆಡಿಎಸ್ ನಾಯಕರು ಅನಿವಾರ್ಯವಾದರೆ, ಆಪರೇಷನ್ಗೆ ಕೈ ಹಾಕಲು ನಿರ್ಧರಿಸಿದ್ದು, ಬಿಜೆಪಿಯ ಶಿರಗುಪ್ಪ ಶಾಸಕ ಸೋಮಲಿಂಗಪ್ಪ, ರಾಯಚೂರಿನ ಡಾ. ಶಿವರಾಜ್ ಪಾಟೀಲ್, ಸುರಪುರ ಶಾಸಕ ರಾಜೂಗೌಡ, ಕನಕಗಿರಿ ಶಾಸಕ ಬಸವರಾಜ್ ದಡೇಸಗೂರ್ಗೆ ರಿವರ್ಸ್ ಆಪರೇಶನ್ ಮಾಡಲು ಚಿಂತನೆ ಮಾಡಿದ್ದಾರೆ. ಪಕ್ಷಕ್ಕೆ ಬಂದರೆ ಇವರಿಗೆ ಸಚಿವ ಸ್ಥಾನ ನೀಡಲು ದೋಸ್ತಿಗಳು ನಿರ್ಧಾರಿಸಿದ್ದಾರೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ಮೇಲಿನ ಶಾಸಕರ ಜತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿರೋ ಕಾಂಗ್ರೆಸ್ ನಾಯಕರು, ಬಿಜೆಪಿ ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಆಪರೇಷನ್ ಹಸ್ತ ಮಾಡಲು ಮುಂದಾಗಿದೆ.