ಬೆಂಗಳೂರು: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ದಿಢೀರ್ ಆಗಿ ರಾಜ್ಯಪಾಲರನ್ನು ಭೇಟಿ ಮಾಡಿದ್ದು, ಸಚಿವ ಸಂಪುಟ ವಿಸ್ತರಣೆಗೆ ಸಮಯ ಕೋರಿದ್ದಾರೆ.
ರಾಜ್ಯ ಸಚಿವ ಸಂಪುಟದ ಖಾಲಿ ಇರುವ ಮೂರು ಸ್ಥಾನ ಭರ್ತಿಗೆ ಮುಂದಿನ ಬುಧವಾರ (ಜೂ. 12) ಬೆಳಗ್ಗೆ 11.30ಕ್ಕೆ ಸಮಯ ನಿಗದಿಯಾಗಿದ್ದಾಗಿ ತಿಳಿದು ಬಂದಿದೆ. ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸುವಂತೆ ಸಿಎಂ ಭೇಟಿ ಸಂದರ್ಭ ರಾಜ್ಯಪಾಲರನ್ನು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಮೂರು ಸಚಿವ ಸ್ಥಾನ ಭರ್ತಿಯಾಗಲಿದ್ದು, ತಲಾ ಒಬ್ಬೊಬ್ಬ ಪಕ್ಷೇತರ ಶಾಸಕರು ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜೆಡಿಎಸ್‍ನ ಇನ್ನೊಂದು ಸ್ಥಾನ ಯಾರ ಪಾಲಾಗಲಿದೆ ಎನ್ನುವುದು ತಿಳಿದು ಬಂದಿಲ್ಲ. ಈ ಸ್ಥಾನಕ್ಕೆ ಕಾಂಗ್ರೆಸ್ ಅತೃಪ್ತ ಶಾಸಕರು ಅವಕಾಶ ಪಡೆಯುತ್ತಾರಾ? ಅಥವಾ ಜೆಡಿಎಸ್ ಶಾಸಕರಿಗೆ ಅವಕಾಶ ಸಿಗುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ.
ಇನ್ನು ಮಾಜಿ ಸಚಿವ ಆರ್.ಶಂಕರ್ ಮತ್ತೆ ಸಚಿವರಾಗುವುದು ಬಹುತೇಕ ಖಚಿತವಾಗಿದ್ದು, ಈ ಹಿನ್ನೆಲೆ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ್ದಾರೆ. ಒಂದೆರಡು ದಿನದಲ್ಲಿ ಸಂಪುಟ ವಿಸ್ತರಣೆ ಸಾಧ್ಯತೆ ಹಿನ್ನಲೆ ಪಕ್ಷೇತರ ಶಾಸಕ ಆರ್.ಶಂಕರ್ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಸಮಾಲೋಚಿಸುವ ಉದ್ದೇಶದಿಂದ ಬಂದಿದ್ದಾರೆ ಎನ್ನಲಾಗಿದೆ. ಜೊತೆಗೆ ಶಾಸಕ ಭೈರತಿ ಬಸವರಾಜ್ ಕೂಡ ಶಂಕರ್ ಜೊತೆ ಆಗಮಿಸಿದ್ದಾರೆ.