ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಈ ಹಿಂದೆ ಸಿಎಂ ಆಗಿದ್ದಾಗ ನಡೆಸಿದ್ದ ಗ್ರಾಮ ವಾಸ್ತವ್ಯದ ಸ್ಥಿತಿಗತಿ ಕುರಿತ ಕಿರುಹೊತ್ತಿಗೆಯನ್ನು ರಾಜ್ಯ ಬಿಜೆಪಿ ಬಿಡುಗಡೆಗೊಳಿಸಿದೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಅವರು, ಗ್ರಾಮ ವಾಸ್ತವ್ಯ-ಶೂನ್ಯ ಸಾಧನೆ, ಈವರೆಗೆ ಸ್ಟಾರ್ ಹೋಟೆಲ್ನಿಂದ ಆಡಳಿತ ಖಜಾನೆ ಲೂಟಿ, ಈಗ ಮತ್ತೆ ಗ್ರಾಮ ವಾಸ್ತವ್ಯದ ಡ್ರಾಮಾ ಹೆಸರಿನ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಯಡಿಯೂರಪ್ಪ ಅವರು, ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ನೇರವಾಗಿ 10 ಪ್ರಶ್ನೆಗಳನ್ನು ಕೇಳಿದರು. ಈ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರ ಇದೆಯಾ ಎಂದು ಪ್ರಶ್ನಿಸಿದರು.
ಬಿಎಸ್ವೈ ಪ್ರಶ್ನೆಗಳೇನು?:
1. 13 ತಿಂಗಳು ತಾಜ್ ವೆಸ್ಟ್ ಎಂಡ್ನಲ್ಲಿ ವಿಲಾಸಿ ಜೀವನ ನಡೆಸುವಾಗ 1,200 ರೈತರು ಮೃತಪಟ್ಟರು ಉತ್ತರ ಇದೆಯಾ?
2. ರೈತರ ಸಾಲ ಮನ್ನಾ ಮಾಡ್ತೀವಿ ಅಂದ್ರಿ, ಋಣಮುಕ್ತ ಪತ್ರ ಕೊಡ್ತೀವಿ ಅಂದ್ರಿ, ನಿಮ್ಮ ಮಾತು ನಂಬಬೇಕಾ?
3. ರಾಜ್ಯದ ಜನ ಬರದಿಂದ ಗುಳೇ ಹೋಗ್ತಿದ್ದಾರೆ. ಈಗ ಗ್ರಾಮ ವಾಸ್ತವ್ಯ ಬೇಕಾ?
4. ಐಎಂಎ ಹಗರಣ ರೂವಾರಿ ಮನ್ಸೂರ್ ಜೊತೆ ಬಿರಿಯಾನಿ ತಿಂದ ನೀವು ಪ್ರಕರಣವನ್ನು ಸಿಬಿಐಗೆ ವಹಿಸದೆ ಮೌನವಾಗಿ ಯಾಕೆ ಇದ್ದೀರಾ?
5. ಶಿಕ್ಷಕರ ವೇತನ 4 ತಿಂಗಳಿನಿಂದ ನೀಡಿಲ್ಲ ಯಾಕೆ?
6. ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್ಗೆ 3,667 ಎಕರೆ ಭೂಮಿ ಮಾರಾಟ ಮಾಡಿದ್ದಕ್ಕೆ ಕಿಕ್ ಬ್ಯಾಕ್ ಎಷ್ಟು ಪಡೆದಿದ್ದೀರಿ?
7. ಗ್ತಾಮ ವಾಸ್ತವ್ಯದ ಗಿಮಿಕ್ ಯಾಕೆ?
8. ಹಿಂದಿನ ಗ್ರಾಮ ವಾಸ್ತವ್ಯದ ಶ್ವೇತ ಪತ್ರ ನೀಡುತ್ತೀರಾ?
9. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹಣ ಎಷ್ಟು ಇಟ್ಟಿದ್ದೀರಿ?
10. ಸರ್ಕಾರದ ಇಲಾಖೆಯಲ್ಲಿ ಹಗಲು ಲೂಟಿ ಮಾಡಿದ್ರೂ ಭರವಸೆ ಕೊಡ್ತೀರಿ ಇದಕ್ಕೆ ಮುಕ್ತಿ ಯಾವಾಗ?.
ಜೂನ್ 26 ರಂದು ರಾಯಚೂರು ಜಿಲ್ಲೆ ಕರೆಗುಡ್ಡ ಗ್ರಾಮದಲ್ಲಿ ಸಿಎಂ ವಾಸ್ತವ್ಯಕ್ಕೆ ತಯಾರಿ ನಡೆಯುತ್ತಿದೆ. ಇಲ್ಲೂ ಕೂಡ ಕನಿಷ್ಠ ಒಂದು ಕೋಟಿ ಖರ್ಚು ಮಾಡುತ್ತಿದ್ದಾರೆ. ಸರಳತೆಯ ಲವಲೇಶವೂ ಇಲ್ಲದ ಸಿಎಂ ರೈತರ ಸಮಸ್ಯೆಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಟೀಕಿಸಿದರು.
ಸ್ಟಾರ್ ಹೋಟೆಲ್ನಿಂದ ಆಡಳಿತ ಪರಿಕಲ್ಪನೆ ಹುಟ್ಟುಹಾಕಿದ ಕೀರ್ತಿ ಹೆಚ್ಡಿಕೆಗೆ ಸಲ್ಲಲಿದೆ:
ಪಂಚತಾರ ಹೋಟೆಲ್ನಿಂದಲೇ ಆಡಳಿತ ನಡೆಸಬಹುದು ಎನ್ನುವ ಹೊಸ ಪರಿಕಲ್ಪನೆಯನ್ನು ಹುಟ್ಟುಹಾಕಿದ ಕೀರ್ತಿ ನಿಮಗೆ ಸಲ್ಲಬೇಕು. ರಾಜಧಾನಿಯಲ್ಲಿ ಕೈಗೊಳ್ಳುವ ನಿರ್ಧಾರವನ್ನು ಸ್ಥಳೀಯವಾಗಿ ಅನುಷ್ಠಾನಗೊಳಿಸುವ ಸಾಮರ್ಥ್ಯ ಸಿಎಂಗೆ ಇಲ್ಲ ಎನ್ನುವುದನ್ನು ಅವರ ಗ್ರಾಮ ವಾಸ್ತವ್ಯ ನಾಟಕ ಸಾಬೀತು ಮಾಡಿದೆ. ಅಧಿಕಾರಿಗಳ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡಿರುವ ಮುಖ್ಯಮಂತ್ರಿ ಅವರು ತಮ್ಮ ಜಿಲ್ಲೆಯ ಉಸ್ತುವಾರಿ ಸಚಿವರನ್ನೇ ನಂಬಲಾಗದ ಸ್ಥಿತಿಯಲ್ಲಿದ್ದಾರೆ. ಮೈತ್ರಿ ಸರ್ಕಾರ ಆಂತರಿಕ ಕಚ್ಚಾಟದಿಂದ ಯಾವಾಗ ಬೇಕಾದರೂ ಬೀಳಬಹುದು ಎನ್ನುವ ವಾತಾವರಣ ಸೃಷ್ಟಿಯಾಗಿದೆ ಎಂದರು.
ಕಳೆದ 13 ತಿಂಗಳು ಪಂಚತಾರ ಹೋಟೆಲ್ನಲ್ಲಿ ನೀವು ಜೀವನ ನಡೆಸುತ್ತಿದ್ದೀರಿ. ಈ ದೇಶದ ಇತಿಹಾಸದಲ್ಲಿ ಯಾವುದಾದರೂ ಮುಖ್ಯಮಂತ್ರಿ ಸ್ಟಾರ್ ಹೋಟೆಲ್ನಲ್ಲಿ ಆಡಳಿತ ನಡೆಸಿದ ಉದಾಹರಣೆ ಇದೆಯೇ?, ಸಾಮಾನ್ಯ ಜನರು ಬಂದು ಅಲ್ಲಿ ನಿಮ್ಮನ್ನು ಭೇಟಿಯಾಗಲು ಸಾಧ್ಯವೇ?, ಗೃಹ ಕಚೇರಿ ಕೃಷ್ಣಾದಲ್ಲಿ ಸಾಮಾನ್ಯ ಜನರನ್ನು ಭೇಟಿಯಾಗಿ ಅವರ ಸಮಸ್ಯೆಗೆ ಸ್ಪಂದಿಸದ ನೀವು ಗ್ರಾಮೀಣ ಪ್ರದೇಶಕ್ಕೆ ಹೋಗಿ ಡ್ರಾಮಾ ಮಾಡುತ್ತಿದ್ದೀರಲ್ಲ. ಇದು ಎಷ್ಟರ ಮಟ್ಟಿಗೆ ಸರಿ ಎಂದು ವಾಗ್ದಾಳಿ ನಡೆಸಿದರು. ಈ ವೇಳೆ ಸದ್ಯದಲ್ಲೇ ಈ ಮೈತ್ರಿ ಸರ್ಕಾರಕ್ಕೆ ಮುಕ್ತಿ ಸಿಗಲಿದೆ. ಜನಪ್ರತಿನಿಧಿಗಳೇ ಮುಕ್ತಿ ದೊರಕಿಸುತ್ತಾರೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.