ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆಯನ್ನೇ ಅರಗಿಸಿಕೊಳ್ಳಲಾಗದ ಮೈತ್ರಿ ಪಕ್ಷಗಳ ನಾಯಕರಿಗೆ ಬಿಜೆಪಿ ಮತ್ತೊಂದು ಬಿಗ್ ಶಾಕ್ ನೀಡಲು ಸಿದ್ಧತೆ ನಡೆಸಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ದೋಸ್ತಿ ಸರ್ಕಾರದಲ್ಲಿ ಸಚಿವರಾಗಿರುವವರ ಮೇಲೂ ಬಿಜೆಪಿ ಕಣ್ಣು ಹಾಕಿದ್ದು, ಮೂರರಿಂದ ನಾಲ್ಕು ಸಚಿವರ ಕಡೆಯಿಂದಲೂ ರಾಜೀನಾಮೆ ಕೊಡಿಸುವ ಕಸರತ್ತು ತೆರೆಮರೆಯಲ್ಲಿ ನಡೆದಿದೆ. ಈ ಬಾರಿ ಬಿಜೆಪಿ ಸರ್ಕಾರ ರಚನೆ ಬಗ್ಗೆ ಬಹಳ ಗಂಭೀರವಾಗಿದ್ದು, ಮತ್ತಷ್ಟು ಶಾಸಕರನ್ನು ಸೆಳೆಯಬಹುದೆನ್ನುವ ಲೆಕ್ಕಾಚಾರವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್ನ ಹಿರಿಯ ನಾಯಕ ಹೆಚ್.ವಿಶ್ವನಾಥ್ ಸಹ ಸಚಿವ ಜಿ.ಟಿ. ದೇವೇಗೌಡ ಅವರು ರಾಜೀನಾಮೆ ನೀಡುವ ಕುರಿತು ಸುಳಿವನ್ನು ನೀಡಿದ್ದಾರೆ. ಹೊಸಕೋಟೆಯ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ವಸತಿ ಸಚಿವ ಎಂ.ಟಿ.ಬಿ. ನಾಗರಾಜ್ ಅವರು ಸಚಿವ ಸ್ಥಾನ ಪದವಿಗೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಇಬ್ಬರು ಸಚಿವರು ಪ್ರತ್ಯೇಕವಾಗಿ ಭಾನುವಾರ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿರುವುದು ಸಹ ಹಲವು ಅನುಮಾನ ಮೂಡಿಸಿದೆ.
ಸಚಿವ ಎಂಟಿಬಿ ನಾಗರಾಜ್ ಅವರು ಈ ಹಿಂದೆಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯನವರ ಮಾತಿಗೆ ಕಟ್ಟುಬಿದ್ದು ಪಕ್ಷದಲ್ಲಿ ಉಳಿದುಕೊಂಡು ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು. ಜೆಡಿಎಸ್ನ ಹಿರಿಯ ಮುಖಂಡರಾದ ಸಚಿವ ಜಿ.ಟಿ. ದೇವೇಗೌಡ ಅವರು ಇತ್ತೀಚೆಗೆ ಪ್ರಧಾನಿ ಮೋದಿ ಪರ ಆಡುತ್ತಿರುವ ಮಾತುಗಳು ಬಿಜೆಪಿಗೆ ಹತ್ತಿರವಾಗುತ್ತಿರುವ ಸಂದೇಹವನ್ನು ಮೂಡಿಸಿವೆ. ಬಿಜೆಪಿ ಬಗ್ಗೆ ಜಿ.ಟಿ. ದೇವೇಗೌಡರು ಮೃದು ಧೋರಣೆ ತೋರುತ್ತಿದ್ದಾರೆಂದು ರಾಜಕೀಯವಾಗಿ ವ್ಯಾಖ್ಯಾನಿಸಲಾಗಿತ್ತು. ಸಚಿವರ ಈ ಹೇಳಿಕೆಯಿಂದ ಜೆಡಿಎಸ್ ವರಿಷ್ಠರು ಬಹಳ ಮುಜುಗರಕ್ಕೊಳಗಾಗಿದ್ದರು.
ಉಳಿದಂತೆ ವಿಜಯಪುರ ಜಿಲ್ಲೆಯ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಸೇರಿದಂತೆ ಕೆಲವು ಸಚಿವರ ಮೇಲೂ ಬಿಜೆಪಿ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ. ಸಚಿವರು ರಾಜೀನಾಮೆ ನೀಡಿದರೆ ಒತ್ತಡ ಹೆಚ್ಚಾಗಿ ಮೈತ್ರಿ ಪಕ್ಷಗಳನ್ನು ತೊರೆದು ಹೆಚ್ಚಿನ ಶಾಸಕರು ಕಮಲದತ್ತ ವಾಲಬಹುದೆನ್ನುವುದು ಬಿಜೆಪಿಯ ಲೆಕ್ಕಾಚಾರವಾಗಿದ್ದು, ಶಾಸಕರ ಜತೆಗೆ ಸಚಿವರ ಮೇಲೂ ಕಣ್ಣಿಟ್ಟಿದೆ ಎಂಬ ವದಂತಿ ಹರದಾಡುತ್ತಿದೆ.
ಆದ್ರೆ, ಇದೆಲ್ಲ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತುಗಳಾಗಿದ್ದು, ಈ ಬಗ್ಗೆ ಬಿಜೆಪಿಯ ಯಾವುದೇ ಮುಖಂಡರಿಂದ ಖಚಿತ ಮಾಹಿತಿ ಸಿಕ್ಕಿಲ್ಲ.