ಬೆಂಗಳೂರು: ಜಿಂದಾಲ್‌ಗೆ ಸರ್ಕಾರಿ ಭೂಮಿ ಮಾರಾಟಕ್ಕೆ ಖಂಡನೆ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟು ಅಹೋರಾತ್ರಿ ಧರಣಿ ಆರಂಭಿಸಿರುವ ಬಿಜೆಪಿ ರಾತ್ರಿ ಧರಣಿ ಸ್ಥಳದಲ್ಲಿಯೇ ವಾಸ್ತವ್ಯ ಹೂಡಿದೆ, ರಾತ್ರಿ ಅಲ್ಲಿಯೇ ತಂಗಿ ಮುಂಜಾನೆಯಿಂದ ಮತ್ತೆ ಧರಣಿ ಆರಂಭಿಸಲಿದೆ.
ಹೌದು, ನಗರದ ಮೌರ್ಯ ವೃತ್ತದಲ್ಲಿ ಎರಡು ದಿನಗಳ ಅಹೋರಾತ್ರಿ ಧರಣಿ ಆರಂಭಿಸಿರುವ ಬಿಜೆಪಿ ನಾಯಕರು ಮೊದಲ ದಿನದ ಧರಣಿ ಮುಗಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಮಾಜಿ ಡಿಸಿಎಂ ಆರ್.ಅಶೋಕ್, ಗೋವಿಂದ ಕಾರಜೋಳ, ಸಿ.ಟಿ ರವಿ, ಎಂ.ಪಿ. ರೇಣುಕಾಚಾರ್ಯ, ರವಿಕುಮಾರ್ ಸೇರಿದಂತೆ ಬಿಜೆಪಿ ಶಾಸಕರು, ಸಂಸದರು ಧರಣಿಯ ವೇದಿಕೆ ಪಕ್ಕದಲ್ಲಿ ನಿರ್ಮಿಸಲಾಗಿದ್ದ ಚಿಕ್ಕ ಶೆಡ್ನಲ್ಲಿ ರಾತ್ರಿ ಭೋಜನ ಮುಗಿಸಿದರು.
ಬೆಳಗ್ಗೆ 5.30 ಕ್ಕೆ ಎದ್ದೇಳಲಿರುವ ನಾಯಕರು ವಾಕಿಂಗ್ ಮುಗಿಸಿ ಉಪಹಾರ ಸೇವನೆ ಮಾಡಿ ನಂತರ ಧರಣಿ ಆರಂಭಿಸಲಿದ್ದಾರೆ. ಇಂದು ಇಡೀ ದಿನ ಧರಣಿ ನಡೆಯಲಿದ್ದು ಇಂದು ರಾತ್ರಿಯೂ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಬಿಜೆಪಿ ಶಾಸಕರು ಮತ್ತು ಸಂಸದರ ಧರಣಿ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.