ಬೆಂಗಳೂರು: ಬಿಜೆಪಿ ಶಾಸಕ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ನಿಯೋಗ ಸ್ಪೀಕರ್ ಭೇಟಿಗೆ ತೆರಳಿತ್ತು. ಆದರೆ ಅವರು ವಿಧಾನಸೌಧದಲ್ಲಿ ಇಲ್ಲದಿರುವ ವಿಷಯ ಗೊತ್ತಾಗಿ ನಿಯೋಗ ವಾಪಾಸ್ ತೆರಳಿದೆ.
ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಅರವಿಂದ ಲಿಂಬಾವಳಿ, ಮಾಧುಸ್ವಾಮಿ, ಗೋವಿಂದ ಕಾರಜೋಳ, ಆರ್.ಅಶೋಕ್ ಸೇರಿದಂತೆ ಹಲವು ಮುಖಂಡರು ಸ್ಪೀಕರ್ ಭೇಟಿ ಮಾಡಲು ವಿಧಾನಸೌಧಕ್ಕೆ ತೆರಳಿದ್ದರು. ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದು, ತಂಡ ತಂಡವಾಗಿ ಅವರನ್ನು ಕರೆಸಿ ವಿಚಾರಣೆ ನಡೆಸುವುದು, ಕೆಲವರ ರಾಜೀನಾಮೆ ಪತ್ರ ಅಸಿಂಧುವಾಗಿರುವುದು ಸೇರಿದಂತೆ ಹಲವು ವಿಷಯಗಳ ಕುರಿತು ಭೇಟಿ ವೇಳೆ ಮಾತುಕತೆ ನಡೆಸಲು ಅವರು ನಿರ್ಧರಿಸಿದ್ದರು. ಆದರೆ ಸ್ಪೀಕರ್ ಭೇಟಿಗೆ ಸಿಗದ ಹಿನ್ನೆಲೆಯಲ್ಲಿ ಅವರು ವಾಪಸ್ ಮರಳಿದ್ದಾರೆ.
ಶಾಸಕರನ್ನು ಅನರ್ಹಗೊಳಿಸುವ ಕುರಿತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಶಾಸಕತ್ವದಿಂದ ಅನರ್ಹಗೊಳಿಸುವಂತೆ ಸ್ಪೀಕರ್ಗೆ ಕಾಂಗ್ರೆಸ್ ದೂರು ಸಲ್ಲಿಕೆ ಮಾಡಿರುವ ಬೆನ್ನಲ್ಲೇ ಬಿಜೆಪಿ ನಿಯೋಗದ ಭೇಟಿ ಮಹತ್ವ ಪಡೆದುಕೊಂಡಿದೆ.