ಬೆಂಗಳೂರು: ಲೋಕಸಭಾ ಚುನಾವಣಾ ಮತದಾನ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಮುನ್ನಲೆಗೆ ಬರುವ ಸುಳಿವು ಸಿಕ್ಕಿದೆ. ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ನ ಅತೃಪ್ತ ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಲು ಚಿಂತನೆ ನಡೆಸಿದ್ದು, ಮೈತ್ರಿ ಸರ್ಕಾರಕ್ಕೆ ದೊಡ್ಡ ಸಂಕಷ್ಟವನ್ನು ತಂದೊಡ್ಡಲಿದ್ದಾರೆ ಎಂಬ ಎನ್ನಲಾಗ್ತಿದೆ.
ಹೌದು, ಡಾ.ಉಮೇಶ್ ಜಾಧವ್ ಅವರನ್ನು ಸೆಳೆದು ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಅಖಾಡಕ್ಕಿಳಿಸಿ ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಿದ್ದ ಬಿಜೆಪಿ ಇದೀಗ ಮತ್ತೊಂದು ಶಾಕ್ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಎರಡು ಬಾರಿ ಸರ್ಕಾರ ರಚನೆಗೆ ವಿಫಲ ಯತ್ನ ನಡೆಸಿದ್ದ ಬಿಜೆಪಿ ಇದೀಗ ಮೂರನೇ ಬಾರಿ ಮತ್ತೊಂದು ಪ್ರಯತ್ನ ನಡೆಸಲು ನಿರ್ಧರಿಸಿ ಮೈತ್ರಿ ಸರ್ಕಾರದ ಪತನಕ್ಕೆ ಮುಹೂರ್ತ ನಿಗದಿ ಮಾಡಿದೆ ಎಂದು ಕೇಸರಿ ಪಾಳೆಯದಿಂದ ಮಾಹಿತಿ ಹೊರಬಿದ್ದಿದೆ.
ಈಗಾಗಲೇ ಸಚಿವ ಸ್ಥಾನ ಕಳೆದುಕೊಂಡಿರುವ ಅತೃಪ್ತ ಬಣದ ನಾಯಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಶಾಸಕರ ತಂಡ ಇಂದು ನಡೆಯುವ ಮತದಾನದ ಬಳಿಕ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರಕ್ಕೆ ಕಂಟಕ ತರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಮೇಶ್ ಜೊತೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ನಾಗೇಂದ್ರ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್, ಭೀಮಾ ನಾಯಕ್, ಜೆ.ಎನ್. ಗಣೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸರದಿಯಲ್ಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಲೋಕಸಭಾ ಚುನಾವಣೆ ಘೋಷಣೆಯಾದ ದಿನದಿಂದಲೂ ಮೈತ್ರಿ ಸರ್ಕಾರಕ್ಕೆ ಈ ಚುನಾವಣೆಯೇ ಡೆಡ್ಲೈನ್, ಚುನಾವಣೆ ನಂತರ ಯಾವ ಕ್ಷಣದಲ್ಲಿ ಬೇಕಾದರೂ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರುಳೀಧರರಾವ್ ಸೇರಿದಂತೆ ರಾಜ್ಯ ಮುಖಂಡರು ಪದೇ ಪದೇ ಹೇಳಿಕೆ ನೀಡಿ ಆಪರೇಷನ್ ಕಮಲದ ಸುಳಿವು ನೀಡಿದ್ದರು. ಇದಕ್ಕೆ ಇಂಬು ನೀಡುವಂತೆ ರಮೇಶ್ ಜಾರಕಿಹೊಳಿ ತಂಡ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳಿಂದ ಅಂತರ ಕಾಯ್ದುಕೊಂಡಿದ್ದು ಸದ್ಯದಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ತಂದೊಡ್ಡಲಿದ್ದಾರೆ ಎಂದು ಹೇಳಲಾಗ್ತಿದೆ.