ಬೆಂಗಳೂರು: ಹಿಂಬದಿಯಿಂದ ಬಂದ ಬೈಕ್, ಕಾರಿಗೆ ಡಿಕ್ಕಿ ಹೊಡೆದಿದ್ದಲ್ಲದೆ ಅದನ್ನು ಪ್ರಶ್ನಿಸಿದ ಕಾರು ಚಾಲಕನ ಮೇಲೆ ಇಬ್ಬರು ದುಷ್ಕರ್ಮಿಗಳು ಮನಬಂದಂತೆ ಥಳಿಸಿರುವ ಘಟನೆ ಮೈಕೊ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂರ್ತಿ (27) ಹಲ್ಲೆಗೆ ಒಳಗಾದ ಚಾಲಕ. ಇದೇ ತಿಂಗಳ 18ರಂದು ಮೂರ್ತಿ ಬಿಟಿಎಂ ಲೇಔಟ್ನ ಕೋಡಿಚಿಕ್ಕನಹಳ್ಳಿ ಬಳಿ ಗ್ರಾಹಕರನ್ನು ಡ್ರಾಪ್ ಮಾಡಲು ಹೋಗಿದ್ದರು. ಮಾರ್ಗ ಮಧ್ಯೆ ಕಾರಿನಲ್ಲಿ ಹೋಗುವಾಗ ಹಿಂಬದಿಯಿಂದ ಬೈಕ್ನಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಕೆಳಗಿಳಿದು ಪ್ರಶ್ನಿಸಿದಕ್ಕೆ ಆಕ್ರೋಶಗೊಂಡು ಚಾಲಕನ ವಿರುದ್ಧ ನಾವು ಲೋಕಲ್, ನಮ್ಮನ್ನೇ ಪ್ರಶ್ನೆ ಮಾಡ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ.
ಈ ವೇಳೆ ಕಾರಿನ ಗ್ಲಾಸ್ ಪುಡಿ ಮಾಡಿ ಗ್ಯಾರೇಜ್ ವಸ್ತುಗಳಿಂದ ಹಲ್ಲೆ ನಡೆಸಿ, ಕಾರಿನ ಮೇಲೆ ಇಟ್ಟಿಗೆ ಹಾಕಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡಿರುವ ಮೂರ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.