ಬೆಂಗಳೂರು: ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ನಟಿ ಸುಮಲತಾ ಅಂಬರೀಶ್, ಮತದಾರರಿಗೆ ಮತ್ತಷ್ಟು ಹತ್ತಿರವಾಗಲು ಸೋಷಿಯಲ್ ಮೀಡಿಯಾ ಮೊರೆ ಹೋಗಿದ್ದಾರೆ.
'ನಮಸ್ಕಾರ, ನಾನು ನಿಮ್ಮ ಸುಮಲತಾ ಅಂಬರೀಶ್..' ಈ ಪೀಠಿಕೆ ಮೂಲಕ ಸುಮಲತಾ ಅಂಬರೀಶ್ ತಮ್ಮ ರಾಜಕೀಯ ಬದುಕಿನಲ್ಲಿ ಇನ್ನೊಂದು ಹೆಜ್ಜೆ ಮುಂದೆ ಸಾಗಿದ್ದು, ಸಾಮಾಜಿಕ ಜಾಲತಾಣದ ಪರಿಣಾಮಕಾರಿ ಬಳಕೆಗೆ ಮುಂದಾಗಿದ್ದಾರೆ. ಈಗಾಗಲೇ ಫೇಸ್ಬುಕ್ ಹಾಗೂ ಟ್ವಿಟ್ಟರ್ ಅಕೌಂಟ್ ಹೊಂದಿರುವ ಅವರು, ಮುಂದಿನ ದಿನಗಳಲ್ಲಿ ಈ ಎರಡು ಸೋಷಿಯಲ್ ತಾಣಗಳಲ್ಲಿ ತಮ್ಮ ಅಭಿಮಾನಿಗಳು, ಕಾರ್ಯಕರ್ತರಿಗೆ ಲಭ್ಯವಾಗಲಿದ್ದಾರೆ. ಅಲ್ಲದೆ ಇದನ್ನೇ ರಾಜಕೀಯ ಪ್ರಚಾರ ವೇದಿಕೆಯಾಗಿ ಕೂಡ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ.
ನಿನ್ನೆ ಸಂಜೆ ಸಚಿವ ಡಿ.ಕೆ. ಶಿವಕುಮಾರ್ ತಮ್ಮ ಸರ್ಕಾರಿ ನಿವಾಸದಲ್ಲಿ ಮಂಡ್ಯ ಭಾಗದ ಕಾಂಗ್ರೆಸ್ ನಾಯಕರನ್ನು ಕರೆದು ಸಮ್ಮಿಶ್ರ ಸರ್ಕಾರದಿಂದ ಕಣಕ್ಕಿಳಿಯುವ ಜೆಡಿಎಸ್ ಅಭ್ಯರ್ಥಿಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಸುಮಲತಾ ಸಾಮಾಜಿಕ ಜಾಲತಾಣ ಪರಿಣಾಮಕಾರಿ ಬಳಕೆಗೆ ಮುಂದಾಗಿದ್ದು ಇನ್ನಷ್ಟು ಅಚ್ಚರಿ ಮೂಡಿಸಿದೆ.
ಸುಮಲತಾ ಅವರೊಂದಿಗೆ ಮಾತುಕತೆ ನಡೆಸುತ್ತೇವೆ. ಅವರನ್ನು ಒಪ್ಪಿಸುವ ಯತ್ನ ಮಾಡುತ್ತೇವೆ ಎಂದು ಡಿಕೆಶಿ ನಿನ್ನೆಯಷ್ಟೇ ಹೇಳಿದ್ದರು. ಆದರೆ, ಅದಕ್ಕೆ ವಿರುದ್ಧವಾದ ಬೆಳವಣಿಗೆ ನಡೆಯುತ್ತಿದೆ. ಚುನಾವಣಾ ಕಣದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯದಿರಲು ಸುಮಲತಾ ಅಂಬರೀಶ್ ನಿರ್ಧರಿಸಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತಿದೆ.
ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಅವರು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, “ನಮಸ್ಕಾರ ನಾನು ನಿಮ್ಮ ಸುಮಲತಾ ಅಂಬರೀಶ್, ಇನ್ನುಮುಂದೆ ಸಾಮಾಜಿಕ ಜಾಲತಾಣವಾದ ಫೇಸ್ಬುಕ್, ಟ್ವಿಟ್ಟರ್ನಲ್ಲಿ ನಾನು ನಿಮ್ಮ ಸಂಪರ್ಕದಲ್ಲಿರುತ್ತೇನೆ. ಇದು ನನ್ನ ಅಧಿಕೃತ ಪೇಜ್ ಆಗಿರುತ್ತದೆ. ಧನ್ಯವಾದಗಳು...’ ಎಂದು ಹೇಳಿದ್ದಾರೆ. ಅವರ ಈ ವಿಡಿಯೋವನ್ನು ಈವರೆಗೆ 2 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, 500ಕ್ಕೂ ಹೆಚ್ಚು ಲೈಕ್ಸ್, 150ಕ್ಕೂ ಹೆಚ್ಚು ಕಮೆಂಟ್ಗಳು ಹಾಗೂ 150ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.