ಬೀದರ್: ಕೆಲ ದಿನಗಳ ಹಿಂದೆ ಯುವಕನೊಬ್ಬ ನಡೆಸಿದ್ದ ಮಾರಣಾಂತಿಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಈ ಘಟನೆ ಕುರಿತು ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?: ಡಿಸೆಂಬರ್ 16ರಂದು ಬೀದರ್ ನಗರವೇ ಬೆಚ್ಚಿ ಬಿದ್ದಿತ್ತು. ಹಣದ ವ್ಯವಹಾರ ಸಂಬಂಧ ಯುವಕನೊಬ್ಬ ಮಹಿಳೆಗೆ ಹರಿತವಾದ ಆಯುಧದಿಂದ ಇರಿದು ಗಂಭೀರ ಗಾಯಗೊಳಿಸಿದ್ದ. ನಿಮಿಷಾ ತುಕಾರಾಮ(32) ಎಂಬ ಮಹಿಳೆ ಮೇಲೆ ದಾಳಿ ಮಾಡಿದ ಪವನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನ್ಯೂ ಆದರ್ಶ ಕಾಲನಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ನಿಮಿಷಾ ಜತೆ ಸಮೀಪದ ಅಂಗಡಿ ಹೊಂದಿದ್ದ ಪವನ್ ಎಂಬಾತ ಹಣದ ವ್ಯವಹಾರ ಸಂಬಂಧ ಜಗಳ ಆಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ಪವನ್ ಪಾರ್ಲರ್ನಲ್ಲಿದ್ದ ಹರಿತವಾದ ಆಯುಧದಿಂದ ನಿಮಿಷಾ ಹೊಟ್ಟೆ ಮತ್ತು ಕುತ್ತಿಗೆಗೆ ಐದಾರು ಬಾರಿ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಅಮೀಶಾಳನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸುಮಾರ ನಾಲ್ಕೈದು ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ನಿಮಿಷಾ ಕೊನೆಗೂ ಬದುಕುಳಿಯಲಿಲ್ಲ. ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಈ ಘಟನೆ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.