ಬೀದರ್(ಬಸವಕಲ್ಯಾಣ): ಬಸವಕಲ್ಯಾಣ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ ವಲಸಿಗ ಎಂದು ಹೇಳುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಬಿಟ್ಟು ಬಾದಾಮಿ ಕ್ಷೇತ್ರದಿಂದ ಯಾಕೆ ಚುನಾವಣೆಗೆ ಸ್ಪರ್ಧಿಸಿದರು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಟಾಂಗ್ ನೀಡಿದರು.
ಜಿಲ್ಲೆಯ ಬಸವಕಲ್ಯಾಣ ನಗರದ ಶಾಂತಿನಿಕೇತನ ಶಾಲೆಯ ಗ್ರೌಂಡ್ನಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ ಪರ ಚುನಾವಣೆ ಪ್ರಚಾರ ನಿಮಿತ್ತ ಬಂಜಾರ ಸಮಾವೇಶದಲ್ಲಿ ಮಾತನಾಡಿದ ಅವರು, ಬಸವಣ್ಣನ ಕರ್ಮ ಭೂಮಿ ಬಸವಕಲ್ಯಾಣದಲ್ಲಿ ಎಲ್ಲರಿಗೂ ಪ್ರವೇಶವಿದೆ. ಮೈಸೂರಿನಿಂದ ಬಾದಾಮಿಗೆ ಬಂದು ಸಿದ್ದರಾಮಯ್ಯ ನಿಲ್ಲೋದಾದ್ರೆ ಪಕ್ಕದ ಜಿಲ್ಲೆ ಕಲಬುರಗಿಯ ಶರಣು ಸಲಗಾರ ನಿಲ್ಲೋದ್ರಲ್ಲಿ ತಪ್ಪೇನಿದೆ ಎಂದರು.
ಕಾಂಗ್ರೆಸ್ ಮುಳುಗುವ ದೋಣಿಯಾಗಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜನಪರ ಕಾರ್ಯಗಳನ್ನು ಮಾಡುವ ಮೂಲಕ ಸದಾ ಜನರ ಆಶೀರ್ವಾದಲ್ಲಿರಲಿದೆ ಎಂದರು.
ಬಂಡಾಯವೆದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸ್ವಾರ್ಥಕ್ಕಾಗಿ ಏನು ಬೇಕಾದ್ರು ಮಾಡ್ತಾರೆ. ಬಿಜೆಪಿ 2018ರಲ್ಲಿ ಅಭ್ಯರ್ಥಿ ಮಾಡಿತ್ತು. ಆದ್ರೆ ಅವರು ಮಾಡಿದ್ದೇನು? ಚುನಾವಣೆ ಸೋಲಿನ ನಂತ್ರ ದೇಹಲಿ ಮನೆಯಲ್ಲೇ ಉಳಕೊಂಡ್ರು. ಜನರಿಂದ ದೂರವಾಗಿ ಯಾರೂ ಜನನಾಯಕ ಆಗಲ್ಲ. ಹೀಗಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಶರಣು ಸಲಗಾರಗೆ ಪಕ್ಷ ಟಿಕೆಟ್ ನೀಡಿದೆ ಎಂದರು.