ಬೀದರ್: ಕೂಲಿ ಮಾಡಿ ಬದುಕು ಕಟ್ಟಿಕೊಳ್ಳಲು ಉದ್ಯೋಗ ಅರಸಿ ದೂರದ ಉತ್ತರ ಪ್ರದೇಶದಿಂದ ಎರಡು ಮಕ್ಕಳನ್ನು ಬಿಟ್ಟು ಜಿಲ್ಲೆಗೆ ಆಗಮಿಸಿದ್ದ ಕುಟುಂಬವೊಂದು ಕಣ್ಣೀರು ಹಾಕುತ್ತಿದೆ.
ಹೌದು, ನಗರದ ವಿದ್ಯಾನಗರ ಬಡಾವಣೆಯಲ್ಲಿ ವಾಸವಾಗಿರುವ ಉತ್ತರ ಪ್ರದೇಶದ ಕನ್ನೋಜ್ ಜಿಲ್ಲೆಯ ಶಿಬರಾಮು ತಾಲೂಕಿನ ಬುಡಾ ಗ್ರಾಮದ ಸಾವಿತ್ರಿ, ಯೊಗೇಂದ್ರ ಎಂಬ ದಂಪತಿ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಟ್ಟು ಮೂರು ಮಕ್ಕಳಿದ್ದು, ಎರಡು ಗಂಡು, ಒಂದು ಹೆಣ್ಣು ಮಗುವಿದೆ. 8 ವರ್ಷದ ಗಂಡು ಮಗು ಹಾಗೂ 5 ವರ್ಷದ ಹೆಣ್ಣು ಮಗುವನ್ನು ಸ್ವಂತ ಊರಲ್ಲೇ ಬಿಟ್ಟು ಬೇಸಿಗೆಯ ಅವಧಿಯಲ್ಲಿ ಐಸ್ ಕ್ರೀಂ ಮಾರಾಟ ಮಾಡಿ ಸ್ವಲ್ಪ ದುಡ್ಡು ಸಂಪಾದನೆ ಮಾಡಿಕೊಂಡು ತಮ್ಮೂರಿಗೆ ತೆರಳಲು ನಿರ್ಧರಿಸಿದ್ದರು. ಆದ್ರೆ ಲಾಕ್ಡೌನ್ನಿಂದಾಗಿ ವ್ಯಾಪಾರವೂ ಆಗಿಲ್ಲ. ಮನೆಯಲ್ಲಿ ಮಕ್ಕಳು ಹೇಗೆ ಬದುಕುತ್ತಿದ್ದಾವೋ ಗೊತ್ತಾಗ್ತಿಲ್ಲ. ನಾವು ನಮ್ಮ ಮಕ್ಕಳ ಬಳಿಗೆ ಹೊಗಬೇಕು. ದಯವಿಟ್ಟು ಸಹಕಾರ ಮಾಡಿ ಎಂದು ತಾಯಿ ಸಾವಿತ್ರಿ ನೋವು ತೋಡಿಕೊಂಡಿದ್ದಾರೆ.
ಮೂರು ತಿಂಗಳಿಂದ ನಗರದಲ್ಲೇ ಇದ್ದೇವೆ. ಬಾಡಿಗೆ, ವಿದ್ಯುತ್ ಬಿಲ್, ದಿನಸಿ ಖರೀದಿಗೆ ಹಣ ಎಲ್ಲಿಂದ ತರಬೇಕು? ಮೇಲಾಗಿ ಮಕ್ಕಳಿಂದ ದೂರವಾಗಿ ನಾವು ಬದುಕಲು ಹೇಗೆ ಸಾಧ್ಯ? ಯುಪಿ ಸರ್ಕಾರ ನಮ್ಮನ್ನು ವಾಪಸ್ ಕರೆಸಿಕೊಳ್ಳಲಿ ಎಂದು ಮಕ್ಕಳ ತಂದೆ ಯೋಗೇಂದ್ರ ಮನವಿ ಮಾಡಿದ್ದಾನೆ.