ಬಸವಕಲ್ಯಾಣ: ವಿಶ್ವಗುರು ಬಸವಣ್ಣ ಸೇರಿದಂತೆ ಯಾವುದೇ ಶರಣರ ವಚನ ಸಾಹಿತ್ಯಕ್ಕೆ ಧಕ್ಕೆ ತಂದಲ್ಲಿ ಸುಮ್ಮನಿರಲ್ಲ. ಅವರು ಎಂತಹವರೆ ಆಗಿದ್ರೂ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಬಿಜೆಪಿ ಮುಖಂಡ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಎಚ್ಚರಿಸಿದರು.
ನಗರದ ತ್ರಿಪುರಾಂತನಲ್ಲಿರುವ ತಮ್ಮ ನಿವಾಸಲ್ಲಿ ನಡೆದ ಪಕ್ಷದ ಕಾರ್ಯಕರ್ತರು ಮತ್ತು ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಶರಣರು, ಸಂತರ ಹೆಸರುಗಳನ್ನಾಗಿ, ಅವರ ಸಾಹಿತ್ಯವನ್ನಾಗಲಿ ರಾಜಕೀಯಕ್ಕೆ ಬಳಕೆ ಮಾಡುವುದು ಸಲ್ಲದು ಎಂದರು.
ಹಾಲಿ ಶಾಸಕ ದಿ. ಬಿ. ನಾರಾಯಣರಾವ್ ಅವರ ಅಕಾಲಿಕ ನಿಧನದಿಂದಾಗಿ ಅನಿರೀಕ್ಷಿತವಾಗಿ ಉಪ ಚುನಾವಣೆ ಎದುರಾಗಿದೆ. ಇಂತಹ ಸಮಯ ಬರುತ್ತೆ ಎಂದು ತಾವು ಯಾವತ್ತು ಅಂದುಕೊಂಡಿರಲಿಲ್ಲ. ಆದರೆ ಚುನಾವಣೆ ಅಂದ ಮೇಲೆ ತಾವು ಸ್ಪರ್ಧಿಸಬೇಕು ಎನ್ನುವ ಆಕಾಂಕ್ಷೆ ಇರುವುದು ಸಹಜ, ಪ್ರಚಾರಕ್ಕಾಗಿ ಬಸವಣ್ಣ ಸೇರಿದಂತೆ ಯಾವುದೇ ಶರಣರು, ಸಂತರೊಂದಿಗೆ ತಮ್ಮನ್ನು ಹೊಲಿಸಿಕೊಂಡು ಪ್ರಚಾರ ಪಡೆಯುವ ಕೀಳು ಮಟ್ಟದ ರಾಜಕೀಯ ಯಾರು ಮಾಡಬಾರದು ಎಂದರು.
ಕೆಲ ವರ್ಷಗಳ ಹಿಂದೆ ಗುರು ಬಸವಣ್ಣನವರ ವಚನಾಂಕಿತ ತಿರುಚಿದ ಕಾರಣಕ್ಕೆ ಲಿಂಗಾಯತ ಸಮಾಜದ ಅತ್ಯಂತ ಹಿರಿಯ, ಪೂಜ್ಯರು ಆಗಿದ್ದ ಮಾತೆ ಮಹಾದೇವಿ ಅವರಂತಹ ಮಹಾನುಭಾವಿಗೂ ನಾವು ಸುಮ್ಮನೆ ಬಿಟ್ಟಿಲ್ಲ. ವಚನಾಂಕಿತಕ್ಕೆ ಧಕ್ಕೆ ತಂದ ಒಂದೇ ಒಂದು ಕಾರಣಕ್ಕಾಗಿ ಇಂದಿಗೂ ಕೂಡ ಅವರನ್ನು ನಾವು ಮುಕ್ತವಾಗಿ ಒಪ್ಪಿಕೊಳ್ಳುವುದಿಲ್ಲ. ಇಂತಹದರಲ್ಲಿ ಕೆಲವರು ಬಸವಣ್ಣನವರ ವಚನಗಳನ್ನು ತಮ್ಮ ಮನಸಿಗೆ ಬಂದಂತೆ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟು ಪುಕ್ಕಟೆ ಪ್ರಚಾರ ಪಡೆಯಲು ಹವಣಿಸುತ್ತಿರುವುದು ಕಂಡು ಬರುತ್ತಿದೆ. ವಚನಗಳನ್ನು ದುರ್ಬಳಕೆ ಮಾಡಿಕೊಳ್ಳುವವರು ಯಾರೆ ಆಗಿದ್ದರು ಅವರನ್ನು ಹಿಡಿದು ತಕ್ಕ ಶಾಸ್ತಿ ಮಾಡಲಾಗುವುದು ಎಂದು ಖೂಬಾ ಎಚ್ಚರಿಸಿದರು.