ಬಸವಕಲ್ಯಾಣ: ನಗರದ ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ನೀಲಾಂಬಿಕಾ ಮಹಿಳಾ ಕಾಲೇಜಿನ ಮುಂದೆ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿರುವ ಅಸಭ್ಯತೆಗೆ ತಕ್ಷಣ ಕಡಿವಾಣ ಹಾಕಬೇಕೆಂದು ಎಬಿವಿಪಿ ಒತ್ತಾಯಿಸಿದೆ.
ಕಾಲೇಜಿನ ಕಾಂಪೌಂಡ್ಗೆ ಜನರು ಮೂತ್ರ ವಿಸರ್ಜನೆ ಮಾಡುತ್ತಿರುವ ಬಗ್ಗೆ ಕಳೆದ 16ರಂದು ಈ ಟಿವಿ ಭಾರತದಲ್ಲಿ ವಿಶೇಷ ಸುದ್ದಿ ಪ್ರಸಾರಗೊಂಡ ಹಿನ್ನೆಲೆಯಲ್ಲಿ ಎಬಿವಿಪಿ ಮುಖಂಡ ಲೋಕೇಶ ಮೋಳಕೇರೆ ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರ ನಿಯೋಗ ಇಲ್ಲಿಯ ನಗರಸಭೆಗೆ ತೆರಳಿ, ಪೌರಾಯುಕ್ತರ ಹೆಸರಿಗೆ ಬರೆದ ಮನವಿ ಪತ್ರವನ್ನು ಎಇಇ ಮಹಮ್ಮದ್ ರಿಯಾಜ್ ಅವರಿಗೆ ಸಲ್ಲಿಸಿತು.
![Urination to college compounds shows indecency at Basavakalyana, ಬೀದರ್ ನೀಲಾಂಬಿಕಾ ಕಾಲೇಜಿನ ಸಮಸ್ಯೆ ನ್ಯೂಸ್](https://etvbharatimages.akamaized.net/etvbharat/prod-images/5118386_bidar.jpeg)
ನಗರದ ಅಂಬೇಡ್ಕರ್ ವೃತ್ತದ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ನೀಲಾಂಬಿಕಾ ಮಹಿಳಾ ಕಾಲೇಜಿನಲ್ಲಿ ನಗರ ಸೇರಿದಂತೆ ಗ್ರಾಮೀಣ ಭಾಗದಿಂದ ಸುಮಾರು 1400ಕ್ಕೂ ಅಧಿಕ ವಿದ್ಯಾರ್ಥಿನಿಯರು ಬಂದು ಅಭ್ಯಾಸ ಮಾಡುತ್ತಾರೆ. ಮುಖ್ಯರಸ್ತೆಯಲ್ಲಿ ಓಡಾಡುವ ನೂರಾರು ಸಾರ್ವಜನಿಕರು ಕಾಲೇಜಿನ ಕಾಂಪೌಂಡ್ಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಬರಲು ಮುಜುಗುರ ಉಂಟಾಗುತ್ತಿದೆ. ಹಾಗೂ ಕಾಂಪೌಂಡ್ಗೆ ತಾಗಿಕೊಂಡಿರುವ ಪ್ರಾಚಾರ್ಯರ ಕೊಠಡಿಯಲ್ಲಿ ಕೂರಲಾಗದಷ್ಟು ದುರ್ನಾತ ಬರತ್ತಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಬರುವ 3 ದಿನಗಳಲ್ಲಿ ಸಾರ್ವಜನಿಕರಿಗೆ ಮೂತ್ರ ವಿಸರ್ಜನೆಗಾಗಿ ಬೇರೆ ವ್ಯವಸ್ಥೆ ಮಾಡಿಕೊಡುವ ಮೂಲಕ ಕಾಲೇಜಿನ ಮುಂಭಾಗದಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಡೆಗಟ್ಟಲು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿನಿಯರೊಂದಿಗೆ ಸೇರಿ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದೆಂದು ಪತ್ರದಲ್ಲಿ ಎಚ್ಚರಿಸಿದ್ದಾರೆ. ಎಬಿವಿಪಿ ಎಸ್.ಎಫ್.ಡಿ, ಮುಖಂಡ ಲೋಕೇಶ ಮೋಳಕೇರೆ, ನಗರ ಕಾರ್ಯದರ್ಶಿ ಶಿವಶಂಕರ, ವಿದ್ಯಾರ್ಥಿನಿಯರಾದ ಸೀಮಾ ಮುಳೆ, ರುಕ್ಮಿಣಿ ಮೇತ್ರೆ, ಗೌರಿ, ಪವಿತ್ರಾ ಶರಣಪ್ಪ ಸೇರಿದಂತೆ ಪ್ರಮುಖರು ಇದ್ದರು.