ಬೀದರ್: ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಎಂದೇ ಪ್ರಸಿದ್ಧಿ ಹೊಂದಿರುವ ಹುಲಸೂರು ತಾಲೂಕಿನ ಗೋರ್ಟಾ(ಬಿ) ಗ್ರಾಮದಲ್ಲಿ 'ಹುತಾತ್ಮ ಸ್ಮಾರಕ' ಸಿದ್ಧವಾಗಿದ್ದು ಭಾನುವಾರ (ಮಾ.26) ಅದ್ಧೂರಿಯಾಗಿ ಕಾರ್ಯಕ್ರಮದೊಂದಿಗೆ ಲೋಕಾರ್ಪಣೆಗೊಳ್ಳಲಿದೆ. ರಾಜ್ಯ ಬಿಜೆಪಿ ಯುವ ಮೋರ್ಚಾ ಕೈಗೆತ್ತಿಕೊಂಡಿದ್ದ ಹುತಾತ್ಮ ಸ್ಮಾರಕಕ್ಕೆ 2014ರ ಸೆಪ್ಟೆಂಬರ್ 17ರಂದು ಅಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ವೇಳೆ ಅಮಿತ್ ಶಾ ಭೂಮಿ ಪೂಜೆ ನೆರವೇರಿಸಿದ್ದರು. ಭೂಮಿಪೂಜೆ ಮಾಡಿದ್ದ ಅಮಿತ್ ಶಾ ಅವರಿಂದಲೇ ಉದ್ಘಾಟನೆ ಆಗುತ್ತಿರುವುದು ವಿಶೇಷ.
ಇನ್ನು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕಾರ್ಯಕ್ರಮ ಸಂಘಟಿಸಿರುವುದು ರಾಜಕೀಯ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ಈ ಸ್ಮಾರಕ ಸಿದ್ಧವಾಗಿದೆ. ಬಿಜೆಪಿ ಯುವ ಮೋರ್ಚಾ ರಾಜ್ಯಾದ್ಯಂತ ಬೂತ್ ಮಟ್ಟದ ನಿಗದಿತ ಕಾರ್ಯಕರ್ತರಿಂದ ದೇಣಿಗೆ ಮೂಲಕ ಇದಕ್ಕೆ ಹಣ ಸಂಗ್ರಹಿಸಿತ್ತು. ಒಂದು ಕೋಟಿಗೂ ಅಧಿಕ ಹಣ ಖರ್ಚು ಮಾಡಿತ್ತು.
ಪ್ರಾರಂಭದಲ್ಲಿ ಕೆಲಸ ಜೋಶ್‍ನಲ್ಲೇ ನಡೆದಿದ್ದರೂ ನಂತರ ನೆನೆಗುದಿಗೆ ಬಿದ್ದಿತ್ತು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಇತ್ತೀಚೆಗೆ ಬೀದರ್ಗೆ ಭೇಟಿ ನೀಡಿದಾಗ ಸ್ಮಾರಕ ವಿಷಯ ಪ್ರಸ್ತಾಪಿಸಿ, ಬೇಗ ಮುಗಿಸುವಂತೆ ಸೂಚನೆ ನೀಡಿ ತೆರಳಿದ್ದರು. ಪಕ್ಷ ಮತ್ತು ಸಂಘದ ಹಿರಿಯರ ಸಭೆ ಹಾಗೂ ಸಮಾಲೋಚನೆ ಬಳಿಕ ಉಳಿದ ಕಾಮಗಾರಿಯನ್ನು ಕೈಗೆತ್ತಿಕೊಂಡು ಮೂರು ತಿಂಗಳಲ್ಲೇ ಮಾಡಿ ಮುಗಿಸಿದ್ದು ಇದರ ಇನ್ನೊಂದು ವಿಶೇಷ ಸಂಗತಿ.
ನಾಳೆ ಬೆಳಗ್ಗೆ 10.30ಕ್ಕೆ ಗೋರ್ಟಾಗೆ ಆಗಮಿಸುವ ಅಮಿತ್ ಶಾ, ಸ್ಮಾರಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಕೇಂದ್ರ ಸಚಿವ ಭಗವಂತ ಖೂಬಾ, ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಇತರರು ಪಾಲ್ಗೊಳ್ಳಲಿದ್ದಾರೆ.
ಪುಣೆಯಲ್ಲಿ ಸಿದ್ಧಪಡಿಸಲಾಗಿರುವ 103 ಅಡಿ ಎತ್ತರದ ಧ್ವಜ ಸ್ತಂಭವನ್ನು ಹುತಾತ್ಮ ಸ್ಮಾರಕ ಸ್ಥಳದಲ್ಲಿ ನೆಡಲಾಗಿದೆ. ಈ ಸ್ತಂಭದ ಮೇಲೆ 20 ಬೈ 30 (600 ಚದರಡಿ) ಅಳತೆಯ ರಾಷ್ಟ್ರಧ್ವಜ ಸದಾ ರಾರಾಜಿಸಲಿದೆ. ಸ್ತಂಭಕ್ಕೆ ವಿಶೇಷ ವಿದ್ಯುತ್ ದೀಪ ಅಳವಡಿಸಲಾಗಿದ್ದು ರಾತ್ರಿ ವೇಳೆ ಝಗಮಗಿಸುತ್ತ ಹತ್ತಾರು ಕಿ.ಮೀ. ದೂರದವರೆಗೆ ಕಾಣಿಸಲಿದೆ. ಇನ್ನು ಗ್ರಾನೈಟ್‍ನಲ್ಲಿ ಸಿದ್ಧಪಡಿಸಿರುವ ಅತ್ಯಾಕರ್ಷಕ 30 ಅಡಿ ಎತ್ತರದ ಸ್ಮಾರಕ ಸ್ತೂಪ ಕೂಡ ಗಮನ ಸೆಳೆಯುತ್ತಿದೆ. ಬೆಂಗಳೂರಿನ ಶಂಕರ ಶಿಲ್ಪ ಶಾಲೆಯಲ್ಲಿ ಇದನ್ನು ತಯಾರಿಸಲಾಗಿದೆ. ಅಲ್ಲದೇ ಹೈ-ಕ ವಿಮೋಚನೆ ರೂವಾರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪಂಚಲೋಹದ ಪ್ರತಿಮೆ ಅನಾವರಣಗೊಳ್ಳುತ್ತಿರುವುದು ಸ್ಮಾರಕದ ಇನ್ನೊಂದು ವೈಶಿಷ್ಟ್ಯ. ನೆಲಮಟ್ಟದಿಂದ ಹಿಡಿದರೆ ಇದು 30 ಅಡಿ ಎತ್ತರದ್ದು ಬೆಳಗಾವಿಯ ಪ್ರಸಿದ್ಧ ಶಿಲ್ಪಿ ಸಂಜಯ ಕಿಲೇಕರ್ ಇದನ್ನು ನಿರ್ಮಿಸಿದ್ದಾರೆ. ಅತ್ಯಾಕರ್ಷಕವಾಗಿರುವ 11 ಅಡಿ ಎತ್ತರದ ಪ್ರತಿಮೆ ನೋಡುಗರಿಗೆ ಪ್ರೇರಣೆ ನೀಡಲಿದೆ.
ಗೋರ್ಟಾ ಗ್ರಾಮದ ಕರಾಳ ಇತಿಹಾಸ: ಹೈದರಾಬಾದ್-ಕರ್ನಾಟಕ ಮುಕ್ತಿ ಆಂದೋಲನದಲ್ಲಿ ಅತಿ ಹೆಚ್ಚಿನ ಸಾವು-ನೋವು ಕಂಡ ಏಕೈಕ ಗ್ರಾಮ ಗೋರ್ಟಾ(ಬಿ). ಇದಕ್ಕೆ ತನ್ನದೇಯಾದ ಕರಾಳ ಇತಿಹಾಸವಿದೆ. ಅಂದು ನಿಜಾಮ್ ಶಾಹಿ, ರಜಕಾರರ ಕ್ರೌರ್ಯ ಮತ್ತು ಅವರ ಅಟ್ಟಹಾಸಕ್ಕೆ ರಕ್ತದೋಕುಳಿ ಹರಿದಿತ್ತು. ಒಂದೇ ದಿನ 200ಕ್ಕೂ ಹೆಚ್ಚು ಜನರ ಪ್ರಾಣಪಕ್ಷಿ ಹಾರಿತ್ತು. ಹೀಗಾಗಿ ಅಕ್ಷರಶಃ ಇದು ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಎನಿಸಿದೆ. 1947ರ ಆಗಸ್ಟ್ 15ಕ್ಕೆ ದೇಶ ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದರೂ ಈ ಭಾಗ ನಿಜಾಮ್ ಶಾಹಿ ಕಪಿಮುಷ್ಠಿಯಲ್ಲಿತ್ತು. ತಿರಂಗಾ ಹಾರಿಸುವುದೂ ಅಪರಾಧವಾಗಿತ್ತು. ಗುಲಾಮಗಿರಿಯಿಂದ ಮುಕ್ತಿ ಪಡೆಯಲು 13 ತಿಂಗಳು ಹಿಡಿಯಿತು. ಅದಕ್ಕಾಗಿ ನೂರಾರು ಜನ ಪ್ರಾಣತ್ಯಾಗ ಮಾಡಬೇಕಾಯಿತು.
ಇದನ್ನೂ ಓದಿ: ಜಮ್ಮು ಕಾಶ್ಮೀರದ ಅಭಿವೃದ್ಧಿಗಾಗಿ ಆರ್ಟಿಕಲ್ 370 ರದ್ದು : ಕೇಂದ್ರ ಸಚಿವ ರಾಮದಾಸ್