ಬೀದರ್: ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳು ಕಲ್ಬುರ್ಗಿ ಜಿಲ್ಲೆಯ ಆಳಂದ ಮತ್ತು ಚಿಂಚೋಳಿ ಕ್ಷೇತ್ರಗಳನೊಳನ್ನೊಳಗೊಂಡ ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಹೈ ಟೆನ್ಷನ್ ಫೈಟ್ ನಡೆದಿದೆ. ಘಟಾನುಘಟಿ ನಾಯಕರು ಬಿರುಸಿನ ಪ್ರಚಾರ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಭರ್ಜರಿ ಕ್ಯಾಂಪೇನ್ ಮಾಡಿದ್ದರು.
28 ಗ್ರಾಮಗಳ ಜನರ ಮುನಿಸು ವಿಭಿನ್ನ ತೀರ್ಪಿಗೆ ಮುನ್ನುಡಿ ಬರೆಯುತ್ತಾ?
ಈ ಬಾರಿ ಎಲೆಕ್ಷನ್ನಲ್ಲಿ ಕಾರಂಜಾ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ ಎಂದು ೨೮ ಗ್ರಾಮಗಳ ರೈತರು ಮುನಿಸಿಕೊಂಡಿದ್ದರೆ, ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಗೆ ನೀರು ಹರಿಸಿಲ್ಲ ಎಂದು ಅದೇಷ್ಟೋ ಜನ ರೈತರು ಆಕ್ರೋಶ ಹೊರ ಹಾಕಿದ್ದರು. ಇದು ರಾಜ್ಯ ಸರ್ಕಾರದ ವೈಫಲ್ಯದ ಮೇಲೆ ಪ್ರಭಾವ ಬೀರುತ್ತಾ ಇಲ್ಲವೇ ಕೇಂದ್ರದ ಮೇಲೆ ಅನ್ನೋದು ಫಲಿತಾಂಶದ ಬಳಿಕವೇ ಗೊತ್ತಾಗಲಿದೆ.
ಲಿಂಗಾಯತ, ಮರಾಠ ಮತಗಳೇ ನಿರ್ಣಾಯಕ!
ಈ ಬಾರಿ ಚುನಾವಣೆಯಲ್ಲಿ ಲಿಂಗಾಯತ ಮತ್ತು ಮರಾಠ ಸಮುದಾಯದ ಮತದಾರರೇ ನಿರ್ಣಾಯಕ ಪಾತ್ರ ವಹಿಸಲಿದ್ದು, ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳು ಲಿಂಗಾಯತರಾಗಿರುವುದರಿಂದ ಮತದಾರ ಯಾರ ಪರ ಮತ ಹಾಕಿದ್ದಾನೆ ಎಂಬುದೇ ಚಿದಂಬರ ರಹಸ್ಯವಾಗಿ ಉಳಿದುಕೊಂಡಿದೆ.
ಬಿಜೆಪಿ ಅಭ್ಯರ್ಥಿ ಖೂಬಾಗೆ ಮೋದಿ ಹವಾನೇ ಶ್ರೀರಕ್ಷೆ
ಮೋದಿ ಹವಾದ ಜೋರಿನಲ್ಲಿ ಮತ್ತೊಮ್ಮೆ ಅಗ್ನಿ ಪರಿಕ್ಷೆಗೆ ಇಳಿದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರ ಎದುರಾಳಿ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಪುತ್ರ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ. ಇಬ್ಬರು ಲಿಂಗಾಯತರೇ ಹಾಗಾಗಿ ಬಿಗ್ ಫೈಟ್ ನಡೆದಿದೆ. ಇಲ್ಲಿ ಈಗ ಮರಾಠ ಮತಗಳು ಬಿಜೆಪಿಗೆ ನಿರ್ಣಾಯಕವಾದರೆ, ಮುಸ್ಲಿಂ ಮತಗಳು ಕಾಂಗ್ರೆಸ್ನ ಹಣೆಬರಹ ನಿರ್ಧರಿಸಲಿವೆ.
ಮೈತ್ರಿಯೇ ಖಂಡ್ರೆ ಭೀಮ ಬಲ ತಂದುಕೊಟ್ಟಿದೆಯಾ?
ಕಳೆದ ಲೋಕಸಭೆ ಚುನಾವಣೆಯಲ್ಲಿ ಹಾಲಿ ಸಚಿವ ಬಂಡೆಪ್ಪ ಕಾಶೆಂಪುರ ಜೆಡಿಎಸ್ ನಿಂದ ಸ್ಪರ್ಧಿಸಿದ್ದರು. ಮಾಜಿ ಸಿಎಂ ದಿ.ಧರಂಸಿಂಗ್ ಕಾಂಗ್ರೆಸ್ ನಿಂದ ಹಾಗೂ ಬಿಜೆಪಿಯಿಂದ ಹಾಲಿ ಸಂಸದ ಭಗವಂತ ಖೂಬಾ ಅಖಾಡದಲ್ಲಿದ್ದರು. ಕಳೆದ ಚುನಾವಣೆಯಲ್ಲಿ ಶೆ.61.16 ಮತದಾನವಾಗಿತ್ತು . ಈ ಬಾರಿ 62.58 ರಷ್ಟು ಮತದಾನವಾಗಿದೆ. ಕಳೆದ ಬಾರಿ ತ್ರಿಕೋನ ಸ್ಪರ್ಧೆ ಇದ್ದರೆ ಈ ಬಾರಿ ನೇರ ಹಣಾಹಣಿ ಇದೆ. ಹೀಗಾಗಿ ಇದು ಕಾಂಗ್ರೆಸ್ಗೆ ಬೋನಸ್ ಆಗುವ ಸಾಧ್ಯತೆಗಳಿವೆ. ಆದರೆ ಮೋದಿ ಹವಾವನ್ನೇ ಖೂಬಾ ನೆಚ್ಚಿಕೊಂಡಿದ್ದಾರೆ.