ಬೀದರ್: ಒಂದು ಹಳೇ ಶಾಲೆ ಕಟ್ಟಡವನ್ನು ನೆಲಸಮಗೊಳಿಸುತ್ತಿರುವ ಜೆಸಿಬಿ ಯಂತ್ರಗಳು. ಮತ್ತೊಂದೆಡೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶಾಲೆಯ ಕೊಠಡಿಗಳು. ಊರ ತುಂಬೆಲ್ಲಾ ಜಿಲ್ಲಾ ಪಂಚಾಯತ್, ಲೋಕೋಪಯೋಗಿ, ಕಂದಾಯ ಇಲಾಖೆ ಅಧಿಕಾರಿಗಳ ದಂಡು, ಹಗಲಿರುಳು ಕೆಲಸ. ಈ ಅದೃಷ್ಟದ ಗ್ರಾಮ ಯಾವುದಂತೀರಾ? ಹಾಗಾದ್ರೆ ಈ ಸುದ್ದಿ ಓದಿ...
ಹೌದು, ಯಾವಾಗ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಈ ತಿಂಗಳಾಂತ್ಯದಲ್ಲಿ ಬೀದರ್ ಜಿಲ್ಲೆಯ ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂನ್ಸೂಚನೆ ನೀಡಿದ್ರೋ ಅಲ್ಲಿಂದ ಕಟ್ಟಡ ನಿರ್ಮಾಣ ಸುಣ್ಣ, ಬಣ್ಣ ಅಂತೆಲ್ಲ ಕೆಲಸಗಳು ಜೋರಾಗಿವೆ. ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಾಂಬ ಗ್ರಾಮದಲ್ಲಿನ ಕನ್ನಡ ಹಾಗೂ ಮರಾಠಿ ಮಾಧ್ಯಮದ ಶಾಲೆಯಲ್ಲಿ ನಾಡ ದೊರೆಯ ವಾಸ್ತವ್ಯಕ್ಕಾಗಿ ಜಿಲ್ಲಾಡಳಿತ ಫುಲ್ ತಯಾರಿಯಲ್ಲಿದೆ.
ಉಜಳಾಂಬ ಕರ್ನಾಟಕ ಮತ್ತು ಮಹರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಗ್ರಾಮ. ಇಲ್ಲಿ ಒಂದನೇ ತರಗತಿಯಿಂದ 10ನೇ ತರಗತಿವರೆಗೂ ಕನ್ನಡ ಹಾಗೂ ಮರಾಠಿ ಎರಡು ಭಾಷೆಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ಇಲ್ಲಿರುವ 8 ಕೊಠಡಿಗಳು ಶಿಥಿಲಾವಸ್ಥೆಯಲ್ಲಿರೋದರಿಂದ ಹಳೇ ಕಟ್ಟಡವನ್ನ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಸಾಕಷ್ಟ ಬಾರಿ ಮನವಿ ಮಾಡಲಾಗಿತ್ತು. ಆದ್ರೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸಿರಲಿಲ್ಲವಂತೆ. ಆದ್ರೀಗ ಮುಖ್ಯಮಂತ್ರಿ ಬರುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ದಿನದ 24 ಗಂಟೆಗಳ ಕಾಲ ಕಾಮಗಾರಿ ಮಾಡುವ ಮೂಲಕ ಒಂದು ತಿಂಗಳಲ್ಲೇ ಶಾಲೆಯ ಕೊಠಡಿಗಳ ಮರು ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಅಂತಾರೆ ಗ್ರಾಮಸ್ಥರು.
ಇನ್ನು ಇಲ್ಲಿನ ಜನರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಹಿನ್ನೆಲೆಯಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪನೆಗೆ ಬೇಡಿಕೆ ಇಡುತ್ತಿದ್ದಾರೆ. ಕೇವಲ ಗ್ರಾಮವಾಸ್ತವ್ಯದ ಹೆಸರಿಗೆ ಮಾತ್ರವಾಗದೆ, ಜನರ ಸಮಸ್ಯೆಗಳಿಗೂ ಪರಿಹಾರ ಸಿಗಬೇಕು ಅನ್ನೋದು ಸ್ಥಳೀಯರ ಒತ್ತಾಯವಾಗಿದೆ.
ಒಟ್ಟಿನಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಈ ಕುಗ್ರಾಮಕ್ಕೆ ಬರ್ತಾರೆ ಅನ್ನೋ ಕಾರಣ ಹಲವಾರು ಸಮಸ್ಯೆಗಳಿಗೆ ಅಧಿಕಾರಿಗಳು ಮುಕ್ತಿ ಹಾಡಿದ್ದಾರೆ. ಸಿಎಂ ಅವರು ಬಂದು ಹೋದ ಮೇಲೂ ಈ ಭಾಗದಲ್ಲಿ ಹೊಸ ಬದಲಾವಣೆಯಾಗಲಿ ಅನ್ನೋ ಆಶಯವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ.