ಬೀದರ್: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಸಂಸದ ಭಗವಂತ ಖೂಬಾ ನಡುವೆ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಆರೋಪ ಪ್ರತ್ಯಾರೋಪ ಈಗ ಬೀದಿಗೆ ಬಂದಿದ್ದು, ಇಬ್ಬರು ನಾಯಕರು ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧವಾಗಿದೆ.
ಇದೇ ನವೆಂಬರ್ 5ರಂದು ಬಹಿರಂಗ ಚರ್ಚೆಗೆ ದಿನಾಂಕ್ ಫಿಕ್ಸ್ ಆಗಿದ್ದು, ಕ್ಷೇತ್ರದಲ್ಲೀಗ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಕಳೆದ ವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಸಂಸದ ಭಗವಂತ ಖೂಬಾ ಅವರಿಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದರು. ಇದಕ್ಕೆ ಒಪ್ಪಿಕೊಂಡ ಸಂಸದ ಭಗವಂತ ಖೂಬಾ ನ. 5ರಂದು ಬೆಳಗ್ಗೆ 11 ಗಂಟೆಗೆ ಬಹಿರಂಗ ಚರ್ಚೆಗೆ ಸಿದ್ಧರಿರುವುದಾಗಿ ಒಪ್ಪಿಕೊಂಡಿದ್ದು ಕೆಲವೊಂದು ಷರತ್ತುಗಳನ್ನು ಹಾಕಿದ್ದಾರೆ.
ಬಹಿರಂಗ ಚರ್ಚೆಯಲ್ಲಿ ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ್ ಅವರ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಯಲಿ. ಚರ್ಚೆಯಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಬ್ರಿಮ್ಸ್ ಆಸ್ಪತ್ರೆಯಲ್ಲಿ ನಡೆದ ಅವ್ಯವಹಾರ, ಮನೆ ಹಂಚಿಕೆಯಲ್ಲಾದ ಅವ್ಯವಹಾರ, ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ವಿಚಾರ, ಅನುಭವ ಮಂಟಪಕ್ಕೆ ಸಂಬಂಧಿಸಿದ ವಿಷಯ, ವೀರಶೈವ ಲಿಂಗಾಯತ ಸೇರಿದಂತೆ ಜಿಲ್ಲೆಯ ಅಭಿವೃದ್ಧಿ ವಿಷಯ ಕುರಿತು ಚರ್ಚೆ ಮಾಡಲು ಒಪ್ಪಿಕೊಂಡಿದ್ದಾರೆ.
ಕಾಂಗ್ರೆಸ್-ಬಿಜೆಪಿ ನಾಯಕರ ಬಹಿರಂಗ ಚರ್ಚೆಯಲ್ಲಿ ಜೆಡಿಎಸ್ ನಾಯಕರ ಮಧ್ಯಸ್ಥಿಕೆ ಇರಲಿದೆ ಎಂದು ಸಂಸದ ಖೂಬಾ ಅವರು ಉಲ್ಲೇಖಿಸಿರುವುದಕ್ಕೆ ಶಾಸಕ ಬಂಡೆಪ್ಪ ಕಾಶೆಂಪೂರ್ ಈ ವಿಚಾರದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಟಸ್ಥರಾಗಿದ್ದಾರೆ.
ಇಬ್ಬರು ನಾಯಕರ ಬಹಿರಂಗ ಚರ್ಚೆಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಪರಿಷತ್ ಸದಸ್ಯರು, ಜಿ.ಪಂ, ತಾ.ಪಂ, ಸದಸ್ಯರು ಸೇರಿದಂತೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು, ಚಿಂತಕರು, ಹೋರಾಟಗಾರರು ಇರಲಿದ್ದಾರೆ ಎಂದು ಖೂಬಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.