ಬೀದರ್: ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರ ಜಾತಿ ಹಾಗೂ ಸ್ಥಳೀಯತೆ ಕುರಿತು 2017ರಲ್ಲೇ ಇತ್ಯರ್ಥವಾದ ಪ್ರಕರಣವೊಂದರ ಸಂಬಂಧ ಜಿಲ್ಲಾಧಿಕಾರಿಯಾಗಿದ್ದ ಡಾ. ಎಚ್ ಆರ್ ಮಹದೇವ್ ನೋಟಿಸ್ ನೀಡಿದ್ದು, ಈ ನೋಟಿಸ್ ಪ್ರಭು ಚೌಹಾಣ್ ಅವರ ಕೈಗೆ ಸೇರಿಲ್ಲ. ಅಂಥದ್ದೊಂದು ನೋಟಿಸ್ ಇದೆಯಾ ಅಂತಲೂ ಗೊತ್ತಿಲ್ಲ. ಈ ನಡುವೆ ಕಾಂಗ್ರೆಸ್ನ ವಿಜಯಕುಮಾರ ಕವಡ್ಯಾಳ ಹಾಗೂ ಮೀನಾಕ್ಷಿ ಸಂಗ್ರಾಮ್ ಸಚಿವರ ತೇಜೋವಧೆ ಮಾಡಲು ಹುನ್ನಾರ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ ಪ್ರತಿಕ್ರಿಯಿಸಿದ್ದಾರೆ.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಭು ಚೌಹಾಣ್ ಏಳ್ಗೆ ಸಹಿಸದೆ ಕಾಂಗ್ರೆಸ್ ಮುಖಂಡರು ಅರ್ಥಹೀನ ವಿಷಯವನ್ನಿಟ್ಟುಕೊಂಡು ಕೆಸರೆರೆಚುವ ಕೃತ್ಯಕ್ಕೆ ಕೈ ಹಾಕಿದ್ದಾರೆ. ಇದಕ್ಕೆ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.
ಈ ವೇಳೆಯಲ್ಲಿ ಮುಖಂಡರಾದ ಅರಹಂತ ಸಾವಳೆ ಮಾತನಾಡಿ, ಜಿಲ್ಲಾಧಿಕಾರಿಗಳ ಕಚೇರಿಯಿಂದ ಜೂನ್ 3ರಂದು ಹೊಡಿಸಲಾಗಿದೆ ಎನ್ನಲಾದ ನೋಟಿಸ್ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಕ್ಷೇತ್ರದ ಜನರಿಂದ ಕಳೆದ ಮೂರು ವರ್ಷಗಳಿಂದ ದೂರವಾದ ವಿಜಯಕುಮಾರ್ ಕವಡ್ಯಾಳ ಈಗ ಒಮ್ಮಲೆ ಸಚಿವರ ಮೇಲೆ ಆರೋಪ ಮಾಡಿ ಪ್ರಚಾರ ಗಿಟ್ಟಿಸಕೊಳ್ಳಬೇಕು ಎಂದು ಹುನ್ನಾರ ನಡೆಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಅಶೋಕ ಹೊಕ್ರಾಣೆ, ಕಿರಣ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.