ಬಸವಕಲ್ಯಾಣ: ವಠಾರ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ತಮ್ಮ ಜಮೀನಿಗೆ ಕರೆದುಕೊಂಡು ಹೋಗಿ ಕೃಷಿ ಕೆಲಸಕ್ಕೆ ಬಳಸಿಕೊಂಡಿದ್ದ ಅನುದಾನಿತ ಖಾಸಗಿ ಶಾಲೆಯ ಶಿಕ್ಷಕಿಯನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಮೋಹನಬಾಯಿ ಜಾಖಡೆ ಅಮಾನತುಗೊಂಡ ಶಿಕ್ಷಕಿ. ನೂತನ ತಾಲೂಕು ಕೇಂದ್ರವಾಗಿರುವ ಹುಲಸೂರ ಪಟ್ಟಣದ ಸಂತ ರಘುನಾಥ ಮಹಾರಾಜ ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿರುವ ಇವರು ಕಳೆದ ಅ.2 ಮತ್ತು 3ರಂದು ಶಾಲೆಗೆ ಬಂದಿದ್ದ ವಿದ್ಯಾರ್ಥಿಗಳನ್ನು ಜಮೀನಿಗೆ ಕರೆದುಕೊಂಡು ಹೋಗಿ ಸೋಯಾ ಬೆಳೆ ಕಟಾವು ಮಾಡುವ ಕೆಲಸಕ್ಕೆ ಮಾಡಿಸಿದ್ದರು. ಸುದ್ದಿ ತಿಳಿದ ತಕ್ಷಣ ಶಾಲೆಗೆ ಧಾವಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಂಜುಕುಮಾರ ಕಾಂಗೆ ಅವರು ಘಟನೆ ಬಗ್ಗೆ ಶಾಲೆ ಮುಖ್ಯಶಿಕ್ಷಕರು ಹಾಗೂ ಆಡಳಿತ ಮಂಡಳಿಯಿಂದ ಮಾಹಿತಿ ಸಂಗ್ರಹಿಸಿದ್ದರು.
ಇದನ್ನೂ ಓದಿ : ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಸೋಯಾ ಬೆಳೆ ತೆಗೆಯಲು ಬಳಸಿಕೊಂಡ ಶಿಕ್ಷಕಿ
ವಿದ್ಯಾರ್ಥಿಗಳನ್ನು ಶಿಕ್ಷಕಿಯು ತಮ್ಮ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಬಳಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪವು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಶಿಕ್ಷಕಿಯನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಶಾಲೆ ಆಡಳಿತ ಮಂಡಳಿಗೆ ನಿರ್ದೇಶನ ನೀಡಿದ್ದರು. ಬಿಇಒ ಅವರ ನಿರ್ದೇಶನದ ಮೆರೆಗೆ ಬುಧವಾರ ಸಭೆ ನಡೆಸಿದ ಆಡಳಿತ ಮಂಡಳಿಯವರು, ಶಿಕ್ಷಕಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.