ಬೀದರ್ : ಸಾರ್ವಜನಿಕರ ಅಹವಾಲು ಸ್ವೀಕರಿಸಲು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಆಗಮಿಸಿದ್ದಾಗ ತಾಲೂಕು ಕಚೇರಿಗಳಲ್ಲಿ ಹಾಕಲಾದ ದೂರು ಪೆಟ್ಟಿಗೆ ಮೇಲೆ ಕೇವಲ ಬಿಜೆಪಿಯವರ ಫೋಟೊ ಹಾಕಿರುವುದಕ್ಕೆ ಹುಮನಾಬಾದ್ ಕಾಂಗ್ರೆಸ್ ಶಾಸಕ ರಾಜಶೇಖರ್ ಪಾಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ದಿ ವಿಚಾರವಾಗಿ ಅಧಿಕಾರಿಗಳ ಸಭೆಯಲ್ಲಿ ಶಾಸಕ ರಾಜಶೇಖರ್ ಪಾಟೀಲ್ ಹಾಗೂ ಪಶು ಸಂಗೋಪನಾ ಸಚಿವ ಪ್ರಭುಚೌಹಾಣ್ ನಡುವೆ ವಾಕ್ಸಮರ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಸಚಿವರು ಜಿಲ್ಲೆಯಾದ್ಯಂತ ತಾಲೂಕು ಕಚೇರಿಯಲ್ಲಿ ದೂರು ಪೆಟ್ಟಿಗೆಗಳನ್ನು ಅಳವಡಿಸಿದ್ದರು, ದೂರು ಪೆಟ್ಟಿಗೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರ ಫೋಟೋಗಳನ್ನು ಮಾತ್ರ ಹಾಕಿಕೊಂಡಿದ್ದೀರಾ, ಜಿಲ್ಲೆಯಲ್ಲಿ ನಾಲ್ಕು ಜನ ಕಾಂಗ್ರೆಸ್ ಶಾಸಕರಿದ್ದೇವೆ ನಮ್ಮ ಫೋಟೊ ಎಲ್ಲಿ ಇದು ಸರ್ಕಾರದ ಕಾರ್ಯಕ್ರಮ ಬಿಜೆಪಿ ಪಕ್ಷದ್ದಲ್ಲ ಎಂದು ರಾಜಶೇಖರ್ ಪಾಟೀಲ್ ತರಾಟೆಗೆ ತೆಗೆದುಕೊಂಡ್ರು.
ನಿಮ್ಮ ದೂರು ಪೆಟ್ಟಿಗೆ ಬಳಿಕ ಎಷ್ಟು ಸಮಸ್ಯೆಗಳು ಪರಿಹಾರವಾದವು ಅದರ ನಿರ್ವಹಣೆ ಯಾವ ರೀತಿ ಮಾಡ್ತಿದ್ದಿರಿ ಎಂದು ಖಡಕ್ ಆಗಿ ಮಾತನಾಡಿದರು. ನೀವು ದೂರು ಪೆಟ್ಟಿಗೆಗೆ ಫೋಟೊ ಹಾಕುವಾಗ ಸ್ಥಳಿಯ ಶಾಸಕರುಗಳು ನೆನಪಿಗೆ ಬರಲಿಲ್ಲವೆ, ಸರ್ಕಾರದ ಖರ್ಚಿನಲ್ಲಿ ಮಾಡುವ ಕಾರ್ಯಗಳಿಗೂ ಸ್ಥಳೀಯ ಶಾಸಕರನ್ನ ಕೈಬಿಟ್ಟಿದ್ದಿರಾ ಎಂದು ತಗಾದೆ ತಗೆದರು.