ಬಸವಕಲ್ಯಾಣ: ಅಂತರ್ಜಲ ಮಟ್ಟ ಕುಸಿಯುತ್ತಿರುವ ಕಾರಣ ಜಿಲ್ಲೆಯಾದ್ಯಂತ ಬೋರ್‌ವೆಲ್ ಕೊರೆಯುವುದನ್ನು ನಿಷೇಧಿಸಿದ ಬಳಿಕವೂ ಖಾಸಗಿ ಸ್ಥಳದಲ್ಲಿ ಹೊಸ ಬೋರ್‌ವೆಲ್ ಕೊರೆಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದು ಕೂಡಲೇ ಸ್ಥಳಕ್ಕೆ ಬಂದ ತಹಶೀಲ್ದಾರ್ ಸಾವಿತ್ರಿ ಸಲಗರ್, ಬೋರ್‌ವೆಲ್ ಕೊರೆಯುವುದಕ್ಕೆ ಬ್ರೇಕ್ ಹಾಕಿದ್ದಾರೆ.
![Tahsildar stopped illegal bore well digging in Basavakalyana](https://etvbharatimages.akamaized.net/etvbharat/prod-images/kn-bdr-28-2-thashildar-raide-stop-borwel-driling-kac10003_28022020183744_2802f_1582895264_480.jpg)
ತುರ್ತುಪರಿಸ್ಥಿತಿಯಲ್ಲಿ ಮಾತ್ರ ಸ್ಥಳೀಯ ಆಡಳಿತದಿಂದ ಅನುಮತಿ ಪಡೆದು ಬೋರ್‌ವೆಲ್ ಕೊರೆಯಬಹುದಾಗಿದ್ದು, ಪೂರ್ವಾನುಮತಿ ಇಲ್ಲದೆ ಬೋರವೆಲ್ ಕೊರೆಯುವುದು ಅಪರಾಧವಾಗಿದೆ. ಆದರೂ ನಗರದ ಗಂಗಾ ಕಾಲೋನಿಯಲ್ಲಿ ಬೋರ್ ಕೊರೆಸಲು ಮುಂದಾಗಿದ್ದ ವಿಚಾರದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರರು ಕೆಲಸವನ್ನು ಅಲ್ಲಿಗೆ ಸ್ಥಗಿತಗೊಳಿಸಿ, ಯಂತ್ರವನ್ನು ಹಿಂದಿರುಗಿಸಬೇಕು, ಇಲ್ಲವಾದಲ್ಲಿ ಮನೆ ಮಾಲೀಕರು ಹಾಗೂ ಯಂತ್ರದ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಎದುರಾಗಿರುವ ಕುಡಿಯುವ ನೀರಿನ ಅಭಾವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬೋರ್‌ವೆಲ್ ಕೊರೆಸುವುದನ್ನು ತಡೆ ಹಿಡಿಯಬೇಕು. ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಬೋರ್‌ವೆಲ್ ಕೊರೆಸಿದರೆ ಯಂತ್ರ ಜಪ್ತಿ ಮಾಡುವ ಜೊತೆಗೆ ಸಂಬಂಧಿತರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.