ಬಸವಕಲ್ಯಾಣ: ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಲಾಕ್‌ಡೌನ್ ಜಾರಿ ಬೇಕೋ ಬೇಡವೋ ಎಂದು ಸರ್ಕಾರ ಯೋಚಿಸುತ್ತಿದ್ದು, ಇಲ್ಲೊಂದು ಗ್ರಾಮ ಪಂಚಾಯತ್ ವತಿಯಿಂದ ಗ್ರಾಮದಲ್ಲಿ ಲಾಕ್‌ಡೌನ್ ನಿಯಮ ಜಾರಿಗೆ ಮುಂದಾಗುವ ಮೂಲಕ ಸೋಂಕು ನಿಯಂತ್ರಣದ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ.
ಗ್ರಾ.ಪಂ. ಅಧ್ಯಕ್ಷ ಅಹ್ಮದ್ ಪಾಶಾ ನೇತೃತ್ವದಲ್ಲಿ ವಿಶೇಷ ಸಭೆ ನಡೆಸಿದ ಗ್ರಾ.ಪಂ. ಆಡಳಿತ ಮಂಡಳಿ ಸದಸ್ಯರು, ಸೋಂಕು ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಿ, ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಪಂಚಾಯತ್‌ನಿಂದ ಜಾರಿಗೊಳಿಸಲಾದ ನಿಯಮಗಳನ್ನು ಗ್ರಾಮದ ಪ್ರತಿಯೊಬ್ಬರೂ ಅನುಸರಿಸಿ, ಸೋಂಕು ನಿಯಂತ್ರಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ನಿನ್ನೆಯಿಂದ ನಾರಾಯಣಪೂರ ಗ್ರಾಮದಲ್ಲಿ ಅಂಗಡಿ-ಹೊಟೆಲ್‌ಗಳಿಗೆ ಸಮಯ ನಿಗದಿಪಡಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ 10ಗಂಟೆವರೆಗೆ ಮತ್ತು ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಮಾತ್ರ ಅಂಗಡಿಗಳನ್ನು ತೆರೆದಿಡಬೇಕು. ಹೋಟೆಲ್‌ಗಳು ಯಾವುದೇ ಕಾರಣಕ್ಕೂ ತೆರಯದೆ ಬಂದ್ ಮಾಡಿ ಸಹಕರಿಸಬೇಕು. ಗ್ರಾಮದ ಮಂದಿರ, ಮಸೀದಿ ಸೇರಿದಂತೆ ವಿವಿಧಡೆ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಗುಂಪಾಗಿ ಕುಳಿತು ಹರಟೆ ಹೊಡೆಯಬಾರದು, ಮನೆಗಳಿಂದ ಹೊರ ಬರಬಾರದು ಎಂದು ಜನರಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕೆ ಮುಂದಾದ ಮುಚಳಂಬ ಗಾಪಂ ಆಡಳಿತ
ಅತ್ಯವಶ್ಯಕ ಕೆಲಸ ಕಾರ್ಯಗಳು ಇದ್ದಾಗ ಮಾತ್ರ ಮನೆಯಿಂದ ಹೊರ ಬರಬೇಕು. ಹೊರ ಬರುವಾಗ ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿಯೇ ಹೊರ ಬರಬೇಕು. ಕೈಗಳನ್ನು ಆಗಾಗ ಸ್ವಚ್ಛಗೊಳಿಸಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಬುಧವಾರ ಸಂಜೆ ಪಿಡಿಓ ಪ್ರಶಾಂತರೆಡ್ಡಿ ನೇತೃತ್ವದಲ್ಲಿ ಸ್ಯಾನಿಟೈಜರ್ ಸಿಂಪಡಿಸುವ ಮೂಲಕ ಚರಂಡಿ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲಾಯಿತು.