ಬೀದರ್: ಜಿಲ್ಲೆಯ ಬಹುತೇಕ ಭಾಗದಲ್ಲಿ ಬಿರುಗಾಳಿ ಮಿಶ್ರಿತ ಜಡಿ ಮಳೆಯಾಗಿದೆ. ಪರಿಣಾಮ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಅವಾಂತರ ಸೃಷ್ಟಿಸಿದೆ.
ಜಿಲ್ಲೆಯ ಔರಾದ್ ತಾಲೂಕಿನ ಯನಗುಂದಾ ಗ್ರಾಮದಲ್ಲಿ ಸಂಜೆ ಸುರಿದ ಬಿರುಗಾಳಿ ಮಿಶ್ರಿತ ಮಳೆಗೆ, ಗ್ರಾಮದಲ್ಲಿ ಹಲವು ಮರಗಳು ಉರುಳಿವೆ. ಇದೇ ವೇಳೆ, ಗ್ರಾಮದ ಹೊರ ವಲಯದಲ್ಲಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಜೋಡಿ ಕಂಬಗಳು ನೆಲಕ್ಕೆ ಅಪ್ಪಳಿಸಿವೆ.
ಔರಾದ್ ಚಿಂತಾಕಿ ಹೆದ್ದಾರಿಯ ರಸ್ತೆ ಮೇಲೆ ಮರ ಬಿದ್ದಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಅಂದಾಜು ಒಂದು ಗಂಟೆ ಸುರಿದ ಮಳೆ ಹಾಗು ಗಾಳಿಗೆ ಹಲವು ಮನೆಗಳ ಮೇಲ್ಛಾವಣಿ ಹಾರಿ ಹೋಗಿದೆ.
ಮುಂಗಾರು ಹಂಗಾಮಿನ ಆರಂಭದ ದಿನಗಳಲ್ಲೇ ಸಕಾಲಕ್ಕೆ ಮಳೆಯಾಗಿದ್ದು, ರೈತ ಸಮುದಾಯದಲ್ಲಿ ಹರ್ಷ ಮೂಡಿಸಿದೆ.