ಬೀದರ್: ಮುಂಗಾರು ಬಿತ್ತನೆಯಾಗಿ ಸಕಾಲಕ್ಕೆ ಮಳೆಯಾಗದೆ ಕುಡಿಯಲು ಹನಿ ನೀರಿಗಾಗಿ ಪರದಾಡುತ್ತಿರುವ ಔರಾದ್ ಪಟ್ಟಣದ ನಿವಾಸಿಗರು ವಿಶೇಷ ಹಬ್ಬ ಆಚರಣೆ ಮಾಡಿ ದೇವರ ಮೊರೆ ಹೋಗಿದ್ದಾರೆ.
ಜಿಲ್ಲೆಯ ಔರಾದ್ ಪಟ್ಟಣದ ಉದ್ಭವಲಿಂಗ ಶ್ರೀ ಅಮರೇಶ್ವರ ಸನ್ನಿಧಾನದಲ್ಲಿ ಪಟ್ಟಣ ನಿವಾಸಿಗರು ವಿಶೇಷ ಪೂಜೆ ನೆರವೇರಿಸಿ ಭಕ್ತಿಯ ಖಾಂಡ್ (ಮಹಾಪ್ರಸಾದ) ತಯಾರಿಸಿ ಮುನಿಸಿಕೊಂಡ ವರುಣನ ಕೃಪೆಗಾಗಿ ಆರಾಧನೆ ಮಾಡಿದ್ದಾರೆ. ಪಟ್ಟಣದ ಮಹಿಳೆಯರು ದೇವಸ್ಥಾನ ಅಂಗಳದಲ್ಲಿ ಬುಲಾಯಿ ಹಾಕಿ ಮಳೆಗಾಗಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಭಯಂಕರ ಬರಗಾಲದಿಂದ ಬೆಂದು ಹೋದ ಪಟ್ಟಣದಲ್ಲಿ ಜನರು ಬೇಸಿಗೆಯಿಂದಲೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಆತಂಕಗೊಂಡ ಜನರು ಈಗ ದೇವರು ಮುನಿಸಿಕೊಂಡಿರಬೇಕು ಎಂದು ಗ್ರಾಮದ ದೇವರಾದ ಅಮರೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ಹಬ್ಬ ಮಾಡಿದ್ದಾರೆ.