ಬಸವಕಲ್ಯಾಣ (ಬೀದರ್): ನಾಯಿ ವಿಷಯಕ್ಕೆ ಆರಂಭವಾದ ಜಗಳದಲ್ಲಿ ಪಾಪಿ ಮಗನೋರ್ವ ತಂದೆಯ ಹೆಣವನ್ನೇ ಉರುಳಿಸಿರುವ ಘಟನೆ ತಾಲೂಕಿನ ಮಿರ್ಜಾಪೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಮೇಶ ಕಾಂಬಳೆ (55) ಕೊಲೆಗೀಡಾಗಿರುವ ವ್ಯಕ್ತಿ. ಮಹಾದೇವ ಕಾಂಬಳೆ (26) ಕೊಲೆ ಆರೋಪಿ.
ಶನಿವಾರ ರಾತ್ರಿ 11ರ ಸುಮಾರಿಗೆ ಸಾಕು ನಾಯಿ ವಿಷಯಕ್ಕೆ ಸಂಬಂಧಿಸಿದಂತೆ ತಂದೆ ಮಗನ ಮಧ್ಯೆ ವಾದ-ವಿವಾದ ಆರಂಭವಾಗಿದೆ. ಇದರಿಂದ ಕೋಪಗೊಂಡ ಮಗ ಮಹಾದೇವ, ಕೈಯಲಿದ್ದ ಸುತ್ತಿಗೆಯಿಂದ ಮೊದಲು ನಾಯಿ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಅದೆ ಕೋಪದಲ್ಲಿ ಅಲ್ಲೇ ಇದ್ದ ತಂದೆ ರಮೇಶನ ತಲೆಗೂ ಅದೇ ಸುತ್ತಿಗೆಯಿಂದ ಹೊಡೆದಿದ್ದಾನೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ತಂದೆ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ಘಟನೆ ನಂತರ ಪೊಲೀಸರಿಗೆ ಮಾಹಿತಿ ನೀಡದೇ ಕುಟುಂದ ಇಬ್ಬರು, ಇತರರ ಸಹಾಯದಿಂದ ರಾತ್ರಿಯೇ ಶವ ಸುಟ್ಟು ಹಾಕುವ ಮೂಲಕ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ.
ಭಾನುವಾರ ಬೆಳಗ್ಗೆ ಸುದ್ದಿ ತಿಳಿದ ಸಿಪಿಐ ಮಹೇಶಗೌಡ ಪಾಟೀಲ, ಪಿಎಸ್ಐ ವಸೀಮ್ ಪಟೇಲ್, ನಿಂಗಪ್ಪ ಮಣ್ಣೂರ ನೇತೃತ್ವದ ಪೊಲೀಸರ ತಂಡ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ಬಳಿಕ ಕೊಲೆ ಮಾಡಿದ ಆರೋಪಿ ಮಹಾದೇವ, ಆತನ ತಾಯಿ ಮತ್ತು ಸಹೋದರ ಸೇರಿದಂತೆ ಇತರರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ ಆರೋಪಿ ಮಹಾದೇವ ಮತ್ತು ಆತನ ಸಹೋದರನನ್ನು ಬಂಧಿಸಿದ್ದಾರೆ.