ಬೀದರ್: ಹೆತ್ತ ತಾಯಿಯನ್ನೇ ಮಗ ಕೊಡಲಿಯಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಟ್ಟಣದ ಚೆಟ್ಟಿ ಗಲ್ಲಿಯಲ್ಲಿ ಮಂಗಳವಾರ ನಡೆದಿದೆ. ಶಂಕುತಲಾ ರಾಜಕುಮಾರ ಸಿಂಧೆ (55) ಹತ್ಯೆಯಾದವರು. ಮಗ ದೀಪಕ ಆರೋಪಿ.
ದೀಪಕ ಕುಡಿತದ ಚಟಕ್ಕೆ ದಾಸನಾಗಿದ್ದ. ಪ್ರತಿನಿತ್ಯ ಹಣ ನೀಡುವಂತೆ ತಾಯಿಯೊಂದಿಗೆ ಜಗಳವಾಡುತ್ತಿದ್ದ ಎಂದು ಸಂಬಂಧಿಕರು ತಿಳಿಸಿದ್ದಾರೆ. ಮಂಗಳವಾರವೂ ಸಹ ಕುಡಿಯಲು ಹಣ ನೀಡುವಂತೆ ಜಗಳ ಮಾಡಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿದೆ. ಕುಪಿತ ಆರೋಪಿ ಕೊಡಲಿಯಿಂದ ತಾಯಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ, ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯ ಬಗ್ಗೆ ಸಂಬಂಧಿಕರು ಸಂಗ್ರಾಮ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಶಂಕುತಲಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಎಸ್ಪಿ ಚನ್ನಬಸವಣ್ಣ ಎಸ್.ಎಲ್., ಹೆಚ್ಚುವರಿ ಎಸ್.ಪಿ.ಮಹೇಶ ಮೇಘಣ್ಣವರ್, ಪ್ರಭಾರಿ ಡಿವೈಎಸ್ಪಿ ಶಿವಾನಂದ ಪವಾಡಶೇಟ್ಟಿ, ಸಿಪಿಐ ಗುರು ಪಾಟೀಲ್, ಪಿಎಸ್ಐ ತಿಮ್ಮಯ್ಯಾ, ವಿಧಿವಿಜ್ಞಾನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಸಂಬಂಧಿ ಸಂಗ್ರಾಮ ಎಂಬವರು ನೀಡಿದ ದೂರಿನ ಮೇರೆಗೆ ಹುಮನಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗೆ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಗಾರ್ಡ್ ಕೊಂದು ಬ್ಯಾಂಕ್ ವಾಹನದಲ್ಲಿದ್ದ 39 ಲಕ್ಷ ರೂಪಾಯಿ ದೋಚಿದ ದುಷ್ಕರ್ಮಿಗಳು, ಇನ್ನಿಬ್ಬರಿಗೆ ಗುಂಡೇಟು