ಬೀದರ್: ಲಾಕ್ಡೌನ್ ನಡುವೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ವಿಧಿಸಿದ್ದ ಸಾಮಾಜಿಕ ಅಂತರ ಮರಿಚಿಕೆಯಾಗಿದೆ.
ಜಿಲ್ಲೆಯ ಭಾಲ್ಕಿ ಪಟ್ಟಣದ ವಾರ್ಡ್ ನಂಬರ್ 23ರ ಭೀಮನಗರದಲ್ಲಿ ಶಾಸಕ ಈಶ್ವರ ಖಂಡ್ರೆ ಅವರು ಸಂಕಷ್ಟದಲ್ಲಿರುವ ಜನರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದರು. ಈ ವೇಳೆ ಜನರು ನೀರಿಗಾಗಿ ಮುಗಿ ಬಿದ್ದು, ಸಾಮಾಜಿಕ ಅಂತರದ ನಿಯಮ ಉಲ್ಲಂಘಿಸಿದ್ದಾರೆ.
ನೀರಿನ ಟ್ಯಾಂಕರ್ ಬಡಾವಣೆಗೆ ಬರುತ್ತಿದ್ದಂತೆ ಕೈಯಲ್ಲಿ ಬಿಂದಿಗೆ ಹಿಡಿದು ಕೊಂಡ ಮಹಿಳೆಯರು ಮತ್ತು ಮಕ್ಕಳು ಎಲ್ಲರೂ ಒಟ್ಟಾಗಿ ಮುಗಿ ಬಿದ್ದಿದ್ದಾರೆ. ಶಾಸಕ ಈಶ್ವರ ಖಂಡ್ರೆ ಅವರು, ಹಲವು ಬಾರಿ ಸಾಮಾಜಿಕ ಅಂತರ ಕಾಪಾಡಿಕೊಂಡು ನೀರು ಪಡೆದುಕೊಳ್ಳಿ' ಎಂದು ಮನವಿ ಮಾಡಿದ್ದರೂ ಜನರು ಕಿವಿಗೊಡಲಿಲ್ಲ.