ಬಸವಕಲ್ಯಾಣ : ಸಂವಿಧಾನ ಸುಟ್ಟು ಹಾಕುವುದು ಅಂದ್ರೆ, ಮನುಷತ್ವವನ್ನೇ ಸುಟ್ಟು ಹಾಕಿದ ಹಾಗೆ. ಇವತ್ತು ಒಳ್ಳೆಯವರ ಕೈಯಲ್ಲಿ ಸಂವಿಧಾನ ಉಳಿದಿಲ್ಲ. ಸಂವಿಧಾನ ಉಳಿದರೆ ಮಾತ್ರ ನಾವೆಲ್ಲ ಉಳಿಯಲು ಸಾಧ್ಯ. ಸಂವಿಧಾನ ಉಳಿಸುವುದಕ್ಕಾಗಿ ನಾವು ಜೈಲಿಗೆ ಹೋಗಲು ಸಿದ್ಧ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ತಿಳಿಸಿದರು.
ಸಂವಿಧಾನ ಸಂರಕ್ಷಣಾ ಸಮಿತಿಯಿಂದ ನಗರದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ವಚನ ಸಾಹಿತ್ಯ ಹಾಗೂ ಸಂವಿಧಾನ ಕುರಿತು ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಉಳಿಸುವುದಕ್ಕಾಗಿ ನಾವು ಯಾವ ಹೋರಾಟಕ್ಕಾದರೂ ಸಿದ್ಧರಿದ್ದೇವೆ ಎಂದರು.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ವಿಶ್ವದ ಸರ್ವಶ್ರೇಷ್ಠ ಸಂವಿಧಾನವಾಗಿದೆ. ಜಾತಿ,ಧರ್ಮ, ವರ್ಗ, ವರ್ಣರಹಿತ ಸಮಾಜ ನಿರ್ಮಾಣದ ಜೊತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆ ಇರಬಾರದು ಎನ್ನುವುದೇ ನಮ್ಮ ಸಂವಿಧಾನ ಹಾಗೂ ಬಸವಣ್ಣನವರು ರಚಿಸಿದ ವಚನ ಸಾಹಿತ್ಯದ ಆಶಯವಾಗಿದೆ. ಬಸವಾದಿ ಶರಣರ ಕನಸಿನ ಭಾರತ ನಿರ್ಮಾಣ ಮಾಡಬೇಕು ಎನ್ನುವುದೇ ನಮ್ಮ ಸಂವಿಧಾನದ ಮೂಲ ಆಶಯವಾಗಿದೆ ಎಂದು ತಿಳಿಸಿದರು.
ಸ್ವಾತಂತ್ರ‍್ಯ ನಂತರ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಏಕಾಂಗಿಯಾಗಿ ಸಂವಿಧಾನ ರಚಿಸಿದ್ದಾರೆ. ಆದರೆ, ಅದಕ್ಕೂ ಕೂಡ ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ. ಸಂವಿಧಾನ ರಚನೆಯಾಗಿ 70 ವರ್ಷ ಕಳೆದಿದ್ದರೂ ಕೂಡ ಸಂವಿಧಾನದ ಆಶಯ ಇದುವರೆಗೂ ಜಾರಿಗೆ ಬಂದಿಲ್ಲ. ಸಾಮಾಜಿಕ ನ್ಯಾಯದ ವಿರೋಧಿಗಳಾದ ಮನುವಾದಿಗಳ ಕೈಯಲ್ಲಿ ಸಂವಿಧಾನ ಸಿಲುಕಿ ನರಳಾಡುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನೂತನ ಕೃಷಿಕಾಯ್ದೆ ವಿರೋಧಿಸಿ ಕಳೆದ 2 ತಿಂಗಳಿಂದ ದೇಶದಲ್ಲಿ ರೈತರು ಪ್ರತಿಭಟನೆ ನಡೆಸುತಿದ್ದಾರೆ. ಆದರೆ, ಅವರ ಸಮಸ್ಯೆ ಆಲಿಸುವ ಬದಲು ರೈತರ ಮೇಲೆ ಜಲ ಫಿರಂಗಿ, ಅಶ್ರುವಾಯು ಪ್ರಹಾರ ನಡೆಸಿ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಸಲಾಗುತ್ತಿದೆ. ಆಡಳಿತ ನಡೆಸಲು 56 ಇಂಚಿನ ಎದೆ ಇದ್ರೆ ಸಾಲದು, ಅದರಲ್ಲಿ ರೈತರ, ಬಡವರ ಕಷ್ಟ ಸುಖ ಆಲಿಸುವ ಒಳ್ಳೆಯ ಹೃದಯ ಇರಬೇಕು ಎಂದು ಪ್ರಧಾನಿ ಮೋದಿ ವಿರುದ್ದ ಕಿಡಿಕಾರಿದರು.
ಓದಿ: ಅನಾಹುತ ನಡೆದರೆ ನರೇಂದ್ರ ಮೋದಿ ಸರ್ಕಾರವೇ ಹೊಣೆ ಹೊರಬೇಕು: ಸಿದ್ದರಾಮಯ್ಯ
ಬಸವಕಲ್ಯಾಣದಲ್ಲಿ ಉಪ ಚುನಾವಣೆ ಇರುವ ಹಿನ್ನೆಲೆ ತರಾತುರಿಯಲ್ಲಿ ಇಲ್ಲಿಗೆ ಓಡಿ ಬಂದ ಮುಖ್ಯಮಂತ್ರಿ ಯಡಿಯೂರಪ್ಪ, ಅನುಭವ ಮಂಟಪ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದ್ದಾರೆ. ಅನುಭವ ಮಂಟಪದ ಪುನರ್ ನಿರ್ಮಾಣದ ಯೋಜನೆ ಹಾಕಿದ್ದೆ ನಮ್ಮ ಸರ್ಕಾರ.
ಅಂದಿನ ಸಚಿವ ಈಶ್ವರ ಖಂಡ್ರೆ, ದಿ.ಶಾಸಕ ಬಿ.ನಾರಾಯಣರಾವ್ ಅವರ ಪ್ರಯತ್ನದ ಫಲವಾಗಿ 2018ರಲ್ಲಿ ಅನುಭವ ಮಂಟಪ ಪುನಃ ಸ್ಥಾಪನೆಗಾಗಿ ಗೋರುಚ ನೇತೃತ್ವದಲ್ಲಿ ಸಮಿತಿ ರಚಿಸಿ ₹650 ಕೋಟಿ ವೆಚ್ಚದ ಅನುಭವ ಮಂಟಪ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು.
ಆದರೆ, ಇಂದು ಉಪ ಚುನಾವಣೆ ಎದುರಾದ ಹಿನ್ನೆಲೆ ತರಾತುರಿಯಲ್ಲಿ ಅಡಿಗಲ್ಲು ನೆರವೇರಿಸಿ ಜನರ ಮುಗಿಗೆ ತುಪ್ಪಾ ಸುರಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರದ ಬಳಿ ಹಣವೇ ಇಲ್ಲ ಎಂದು ಟೀಕಿಸಿದರು.
ವೈದಿಕ ಧರ್ಮದ ವಿರುದ್ಧವಾಗಿ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದರು. ಆದರೆ, ಅನುಭವ ಮಂಟಪದ ಅಡಿಗಲ್ಲು ಸಮಾರಂಭದ ನಿಮಿತ್ತ ಸರ್ಕಾರ ನೀಡಿದ ಜಾಹೀರಾತಿನಲ್ಲಿ ಸನಾತನ ಧರ್ಮ ಚಿಂತನೆಯ ಮರು ಸೃಷ್ಟಿ ಎಂದು ಜಾಹೀರಾತು ನೀಡಲಾಗಿತ್ತು.
ಬಸವಣ್ಣನ ವಿರೋಧಿಸಿದ ಧರ್ಮದ ಮರು ಸ್ಥಾಪನೆ ಮಾಡಲು ಹೊರಟಿದ್ದಾರೆ ಎಂದು ಬಿಎಸ್ವೈ ವಿರುದ್ಧ ಟೀಕಿಸಿದ ಸಿದ್ಧರಾಮಯ್ಯ, ಪ್ರಜ್ಞಾವಂತ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.