ಬಸವಕಲ್ಯಾಣ: ಸಂಕಷ್ಟದ ಸಮಯದಲ್ಲಿ ತಮ್ಮ ಪ್ರತಿಷ್ಠೆಗಾಗಿ ಪಂಥಾಹ್ವಾನ ಬೇಡ ಎಂದು ಸಂಸದ ಭಗವಂತ ಖೂಬಾ ಹಾಗೂ ಭಾಲ್ಕಿ ಶಾಸಕ ಈಶ್ವರ್ ಖಂಡ್ರೆಗೆ ಹುಲಸೂರನ ಶ್ರೀ ಡಾ. ಶಿವಾನಂದ ಮಹಾಸ್ವಾಮೀಜಿ ಸಲಹೆ ನೀಡಿದ್ದಾರೆ.
ಭಾಲ್ಕಿ ವಸತಿ ಯೋಜನೆ ಸೇರಿ ಇತರ ವಿಷಯಗಳ ಕುರಿತು ಸಂಸದ ಭಗವಂತ ಖೂಬಾ ಮತ್ತು ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ ಅವರ ಮಧ್ಯೆ ಬಹಿರಂಗ ಚರ್ಚೆ ನಡೆಸುವ ವಿಷಯ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಕೊರೊನಾದಿಂದಾಗಿ ಕಳೆದ ಏಳು ತಿಂಗಳಿಂದ ಜನತೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ಈ ವರ್ಷ ಮೂರು ಸಲ ಅತಿವೃಷ್ಟಿಯಿಂದಾಗಿ ಸಂಪೂರ್ಣ ಬೆಳೆ ಹಾನಿಯಿಂದ ರೈತರು ಕಷ್ಟ-ನಷ್ಟದಲ್ಲಿ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ಶಾಸಕರು ಮತ್ತು ಸಂಸದರು ಪಂಥಾಹ್ವಾನ ನೀಡಿರುವುದು ಸಮಂಜಸವಲ್ಲ ಎಂದು ಶ್ರೀಗಳು ತಿಳಿಸಿದ್ದಾರೆ.
ಪರಸ್ಪರ ಅರೋಪ, ಪ್ರತ್ಯಾರೋಪ ಮಾಡಿಕೊಂಡು ಪಂಥಾಹ್ವಾನಕ್ಕೆ ಮುಂದಾಗಿದ್ದು, ಬಹಿರಂಗ ಚರ್ಚೆಯ ಸಮಯದಲ್ಲಿ ವಿಷಯ ವಿಷಯಾಂತರವಾಗಿ ಮತ್ತಷ್ಟು ಗೊಂದಲ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಇಬ್ಬರು ಮುಖಂಡರು ಬಹಿರಂಗ ಚರ್ಚೆಯಿಂದ ಹಿಂದೆ ಸರಿದು ಕಷ್ಟದಲ್ಲಿರುವ ಜನರ ನೆರವಿಗೆ ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸಲು ಒಂದಾಗಿ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದ್ದಾರೆ.