ಬಸವಕಲ್ಯಾಣ: ಕಳೆದ ಕೆಲ ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮನೆಯೊಂದರ ಮಾಳಿಗೆ ಕುಸಿದ ಘಟನೆ ನಗರದ ಹೊಸಪೇಟ್‌ಗಲ್ಲಿಯಲ್ಲಿ ನಡೆದಿದೆ. ಮಾಳಿಗೆ ಕುಸಿದು ಬಿದ್ದಾಗ ಈ ಕೋಣೆಯಲ್ಲಿ ಯಾರೂ ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ನಗರದ ವಾರ್ಡ್ ಸಂಖ್ಯೆ 7ರ ವ್ಯಾಪ್ತಿಯಲ್ಲಿಯ ಶ್ರೀಬಸವೇಶ್ವರ ದೇವಸ್ಥಾನ ರಸ್ತೆಯಲ್ಲಿ ಪದ್ಮಾವತಿ ಸುಣಗಾರ ಅವರ ಮನೆಯ ಮಾಳಿಗೆ ನೆನೆದು ಕುಸಿದು ಬಿದ್ದಿದೆ. ಕೋಣೆಯಲ್ಲಿಯ ಎಲ್ಲ ವಸ್ತುಗಳಿಗೆ ಹಾನಿಯಾಗಿವೆ.
ಮನೆಯವರೆಲ್ಲ ಇದೇ ಕೋಣೆಯಲ್ಲಿ ಮಲಗುತ್ತಾರೆ. ಮನೆಯಲ್ಲಿ ಐದು ಜನರಿದ್ದು, ಒಂದು ಸಣ್ಣ ಹಾಲ್, ಒಂದು ಮಲಗುವ ಕೋಣೆ ಮತ್ತು ಒಂದು ಅಡುಗೆ ಕೋಣೆಯಿದ್ದು, ಅಡುಗೆ ಮನೆ ಮತ್ತು ಹಾಲ್ ಇರುವ ಸ್ಥಳದಲ್ಲಿ ತಗಡು ಹಾಕಲಾಗಿದೆ. ಆದರೆ ಮಲಗುವ ಕೋಣೆಯ ಮೇಲೆ ಮಾಳಿಗೆ ಇತ್ತು. ಈ ಮಾಳಿಗೆ ಕುಸಿದು ಬಿದ್ದಾಗ ಮನೆಯ ಒಡತಿ ಅಡುಗೆ ಮನೆಯಲ್ಲಿದ್ದರು. ಉಳಿದವರು ಹೊರಗಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ್ ಹಾಗೂ ನಗರಸಭೆ ಪೌರಾಯುಕ್ತ ಗೌತಮ ಕಾಂಬಳೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.