ಬಸವಕಲ್ಯಾಣ: ಭಾರಿ ಮಳೆಯಿಂದ ಗ್ರಾಮದ ಭೀಮ ನಗರ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದ್ದು, ಬಡಾವಣೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮದ ಬಸವಕಲ್ಯಾಣ-ಭಾಲ್ಕಿ ಮುಖ್ಯರಸ್ತೆಯಲ್ಲಿ ಕಟ್ಟಿಗೆ ಹಾಕಿ ರಸ್ತೆ ತಡೆ ನಡೆಸಿದ ಗ್ರಾಮಸ್ಥರು, ಸಮಸ್ಯೆಯ ಗಂಭೀರತೆ ಅರಿತು ಪುನರ್ ವಸತಿ ಕೇಂದ್ರದಲ್ಲಿ ಕೂಡಲೆ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ ಸಾವಿತ್ರಿ ಸಲಗರ್ ಹಾಗೂ ಅಧಿಕಾರಿಗಳ ತಂಡ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವ ಮೂಲಕ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಧಿಕ ಮಳೆಯಾದಾಗಲೆಲ್ಲ ನೀರು ಮನೆಗಳಿಗೆ ನುಗ್ಗಿ ತೀವ್ರ ಸಮಸ್ಯೆ ಎದುರಿಸುವಂತಾಗುತ್ತಿದೆ. ಕಳೆದ ಕೆಲ ವರ್ಷಗಳ ಹಿಂದೆ ಇದೇ ರೀತಿ ಮಳೆಯಾದಾಗ ಗ್ರಾಮದಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿತ್ತು. ಅಲ್ಲದೆ ಬಡಾವಣೆ ಜನರಿಗೆ ಇಲ್ಲಿಂದ ಸ್ಥಳಾಂತರಿಸುವ ಸಂಬಂಧ ಸರ್ಕಾರದಿಂದ ಜಮೀನು ಗುರುತಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ಇದುವರೆಗೆ ಅಲ್ಲಿ ಮನೆಗಳು ನಿರ್ಮಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಸ್ಥಳೀಯರು ಆಕ್ರೊಶ ವ್ಯಕ್ತಪಡಿಸಿದರು.