ಬೀದರ್: ಕ್ವಾರಂಟೈನ್ ಕೇಂದ್ರವಾಗಿ ಪರಿವರ್ತನೆ ಮಾಡಿರುವ ಶಾಲೆಯಲ್ಲಿ ಕೊರೊನಾ ಕರ್ತವ್ಯ ನಿರ್ವಹಿಸಲು ಶಿಕ್ಷಕರು ಹಿಂದೇಟು ಹಾಕುತ್ತಿದ್ದಾರೆ.
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಕಮಲನಗರ ಪಟ್ಟಣದ ಗುರಪ್ಪ ಟೊಣ್ಣೆ ಶಾಲೆಯಲ್ಲಿ ಸ್ಥಾಪಿಸಲಾದ ಕ್ವಾರಂಟೈನ್ನಲ್ಲಿ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಮಹಾರಾಷ್ಟ್ರದ ಪುಣೆಯಿಂದ ಬಂದ 49 ಜನರು ಕ್ವಾರಂಟೈನಲ್ಲಿದ್ದು, ಒಬ್ಬ ಶಿಕ್ಷಕ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅಲ್ಲಿ ಕೆಲಸ ನಿರ್ವಹಿಸದರೆ ತಮಗೂ ಕೊರೊನಾ ಬರುತ್ತದೆ ಎಂಬ ಭಯದಿಂದ ಈ ರೀತಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನು ಪಟ್ಟಣದ ಹೊರ ವಲಯದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಕ್ವಾರಂಟೈನ್ ಕೇಂದ್ರಕ್ಕಂತೂ ಅಧಿಕಾರಿಗಳೇ ಬರ್ತಿಲ್ವಂತೆ. ಡಿ ಗ್ರೂಪ್ ನೌಕರರು ಮಾತ್ರ ಊಟದ ವ್ಯವಸ್ಥೆ ಮಾಡ್ತಿದ್ದಾರೆ. ಅಲ್ಲದೆ ಕ್ವಾರಂಟೈನ್ನಲ್ಲಿದ್ದ ಜನರು ಮನೆಗಳಿಗೆ ಹೋಗಿ ವಾಪಸ್ ಬರ್ತಿದ್ದಾರಂತೆ. ಸಂಜೆ ಆಗ್ತಿದ್ದಂತೆ ಗೆಳೆಯರೊಂದಿಗೆ ಗುಂಡು ಪಾರ್ಟಿ ಕೂಡ ಮಾಡ್ತಿದ್ದಾರಂತೆ.
ಇತ್ತ ಪೊಲೀಸರ ಬಂದೋಬಸ್ತ್ ಕೂಡ ಇಲ್ಲ, ಅತ್ತ ಅಧಿಕಾರಿಗಳೂ ಸಹ ಇಲ್ಲದೆ ಕ್ವಾರಂಟೈನ್ ಕೇಂದ್ರಗಳು ದುರಾವಸ್ಥೆ ತಲುಪಿವೆ. ಈ ಮುಖಾಂತರ ಕೊರೊನಾ ಹರಡುವ ಕೇಂದ್ರಗಳಾಗಿ ಮಾರ್ಪಾಡಾಗುತ್ತಿವೆ ಎಂಬುದು ಇಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.