ಬೀದರ್: ಗ್ರಾಮದ ಕಿರಾಣಿ ಅಂಗಡಿ, ಹೊಟೇಲ್ ಸೇರಿದಂತೆ ಹಲವೆಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಅದನ್ನು ತಡೆಯಬೇಕೆಂದು ಗ್ರಾಮದ ಮಹಿಳೆಯರು ಪೊಲೀಸರಿಗೆ ಮನವಿ ಸಲ್ಲಿಸಿದರು.
ಔರಾದ್ ತಾಲೂಕಿನ ವನಮಾರಪಳ್ಳಿ ಗ್ರಾಮದ ನೂರಾರು ಮಹಿಳೆಯರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಅಧಿಕಾರಿಗಳಿಗೆ ಅಕ್ರಮ ಮದ್ಯ ಮಾರಾಟ ತಡಯುವಂತೆ ಕೋರಿದರು.
ಗ್ರಾಮದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಈ ಬಗ್ಗೆ ವರ್ಷಗಳಿಂದಲೂ ಅಬಕಾರಿ ಇಲಾಖೆಗೆ ದೂರು ನೀಡುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಮಧ್ಯರಾತ್ರಿಯೂ ಕುಡುಕರು ಆಗಮಿಸಿ ಜೋರಾಗಿ ಮಾತನಾಡುವುದು, ಗಲಾಟೆ ಮಾಡುವ ಕಾರಣಕ್ಕೆ ಮಾರಾಟ ಕೇಂದ್ರದ ಅಕ್ಕಪಕ್ಕದ ಮನೆಯ ಮಹಿಳೆಯರು, ಮಕ್ಕಳು ಜೀವಿಸುವುದಕ್ಕೆ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಗಂಡಂದಿರು ನಮಗೆ ನೀಡುತ್ತಿರುವ ಕಿರುಕುಳ ತಡೆಯಲಾಗುತ್ತಿಲ್ಲ. ಮನೆಯಲ್ಲಿರುವ ಪಾತ್ರೆಯಿಂದ ಮೊದಲುಗೊಂಡು ಕಟ್ಟಿದ ತಾಳಿಯನ್ನೂ ಕಿತ್ತುಕೊಂಡು ಹೋಗಿ ಕುಡಿಯುವ ತನಕ ತಮ್ಮ ಕುಡಿತದ ಚಟವನ್ನು ಹೆಚ್ಚಿಸಿಕೊಂಡಿದ್ದು, ಹೆಂಡತಿಯರ ಗೋಳು ಹೇಳತೀರದಾಗಿದೆ ಎಂದು ನೋವು ತೋಡಿಕೊಂಡರು.