ಬೀದರ್: ಚಾಲಕನ ನಿಯಂತ್ರಣ ತಪ್ಪಿ ಬೈಕ್ ಮೇಲೆ ಟ್ರ್ಯಾಕ್ಟರ್ ಹಾಯ್ದು ಸವಾರನೊಬ್ಬ ಸ್ಥಳದಲ್ಲೇ ಸಾವನಪ್ಪಿದ್ದರಿಂದ ಉದ್ರಿಕ್ತಗೊಂಡ ಜನ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.
ಜಿಲ್ಲೆಯ ಭಾಲ್ಕಿ ಪಟ್ಟಣದ ಬಸವನಗರ ಬಡಾವಣೆ ಬಳಿ ಬೈಕ್ ಮೇಲೆ ಹೊರಟಿದ್ದ ಕಿರಣ್ ಮಾನೆ(25) ಎಂಬಾತನ ಮೇಲೆ ಟ್ರ್ಯಾಕ್ಟರ್ ಹಾಯ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದರಿಂದ ಸ್ಥಳದಲ್ಲಿ ಮೃತನ ಕುಟುಂಬಸ್ಥರು ಹಾಗೂ ಸ್ಥಳೀಯರು ಎರಡು ಗಂಟೆಗಳ ಕಾಲ ಭಾಲ್ಕಿ-ಹುಮನಾಬಾದ್ ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.
ಭಾಲ್ಕಿ ತಾಲೂಕಿನಾದ್ಯಂತ ಒಂದು ವಾರದಲ್ಲೇ ಟ್ರ್ಯಾಕ್ಟರ್ನಿಂದ ಮೂರು ರಸ್ತೆ ಅಪಘಾತವಾಗಿವೆ. ಟ್ರ್ಯಾಕ್ಟರ್ ಚಾಲಕರ ಮೇಲೆ ಕಡಿವಾಣ ಹಾಕುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಕೆಲ ಕಾಲ ಪ್ರತಿಭಟನೆ ಮಾಡಲಾಯಿತು. ನಂತರ ಸ್ಥಳಕ್ಕೆ ಟೌನ್ ಸಿಪಿಐ ರಮೇಶಕುಮಾರ್ ಮೈಲೂರಕರ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾದರು.