ಬೀದರ್: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಗರದಲ್ಲಿ ದಲಿತ ಮೈನಾರಿಟಿ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತದಲ್ಲಿ ಜಮಾಯಿಸಿದ ಸಾವಿರಾರು ಪ್ರತಿಭಟನಾಕಾರರು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಸರ್ಕಾರ ದಲಿತ, ಮುಸ್ಲಿಂ ಸಮುದಾಯವನ್ನು ತುಳಿಯುತ್ತಿದೆ. ಇದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಮಾರಕವಾದ ಕಾಯ್ದೆಯಾಗಿದ್ದು, ಪ್ರಸ್ತುತ ತಿದ್ದುಪಡಿ ಮಾಡಲಾದ ಕಾಯ್ದೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿ ರಾಷ್ಟ್ರಪತಿಗಳಿಗೆ ಬರೆದ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಜಿಲ್ಲಾ ಪೊಲೀಸರು ಮೆರವಣಿಗೆಗೆ ಅವಕಾಶ ನೀಡಿಲ್ಲ. ಹೀಗಾಗಿ ಅಂಬೇಡ್ಕರ್ ವೃತದಲ್ಲೇ ಜಮಾಯಿಸಿ ಪ್ರತಿಭಟನೆ ಮಾಡುವಂತೆ ಪೊಲೀಸರು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ರಹಿಂಖಾನ್, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಸೊಲ್ಲಾಪುರ್ ಸೇರಿದಂತೆ ವಿವಿಧ ದಲಿತ ಹಾಗೂ ಮೈನಾರಿಟಿ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಆಂಬುಲೆನ್ಸ್ಗೆ ದಾರಿ ಮಾಡಿಕೊಟ್ಟ ಪ್ರತಿಭಟನಾಕಾರರು!
ನಗರದ ಅಂಬೇಡ್ಕರ್ ವೃತದಲ್ಲಿ ಜಮಾಯಿಸಿದ ಸಾವಿರಾರು ಜನರ ಗುಂಪು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕ್ತಿರುವಾಗಲೇ ಸರ್ಕಾರಿ ಆಸ್ಪತ್ರೆ ಮಾರ್ಗದಿಂದ ಹೈದರಾಬಾದ್ ಆಸ್ಪತ್ರೆಗೆ ರೋಗಿಯೊಬ್ಬರನ್ನು ಸಾಗಾಟ ಮಾಡಲು ಆಂಬುಲೆನ್ಸ್ ಸೈರನ್ ಹಾಕಿಕೊಂಡು ಬಂತು. ಇದನ್ನು ಕಂಡ ಪ್ರತಿಭಟನಾನಿರತರು ಸಾಮೂಹಿಕವಾಗಿ ದಾರಿ ಮಾಡಿಕೊಟ್ಟು ಮಾನವೀಯತೆ ಮೆರೆದರು.