ಬೀದರ್: ಕೊರೊನಾ ಸೋಂಕಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿ ಇಂದು ಸಾವಿಗೀಡಾಗಿರುವ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ರಾಜಕೀಯವಾಗಿ ಸಾಕಷ್ಟು ಕಷ್ಟಪಟ್ಟು ಕೊನೆ ಘಳಿಗೆಯಲ್ಲಿ ಜನಾಶಿರ್ವಾದ ಪಡೆದು ಶಕ್ತಿಕೇಂದ್ರ ವಿಧಾನಸೌಧ ಪ್ರವೇಶಿಸಿದ್ದರು.
30 ಜುಲೈ 1954 ರಂದು ಬೀದರ್ ತಾಲೂಕಿನ ಬಸವಂತಪೂರ ಗ್ರಾಮದಲ್ಲಿ ಜನಿಸಿದ ಬಿ.ನಾರಾಯಣರಾವ್ ಅವರು, ಬಿ.ಎ ಪದವಿಧರರಾಗಿದ್ದು ಖಡಕ್ ಮಾತುಗಾರಿಕೆಯವರು. ಇದ್ದಿದ್ದು ಇದ್ದಂಗೆ ಹೇಳುವ ವಾಕ್ ಚಾತುರ್ಯ ಅವರನ್ನು ದಿಗ್ಗಜ ರಾಜಕಾರಣಿಯನ್ನಾಗಿ ಮಾಡಿತು.
1987 ರಲ್ಲಿ ಬೀದರ್ ತಾಲೂಕಿನ ಮಾಳೆಗಾಂವ್ ಜಿಲ್ಲಾ ಪಂಚಾಯತಿ ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾದ ನಾರಾಯಣರಾವ್, 1989 ಅಷ್ಟರಲ್ಲಿ ಜನತಾ ಪರಿವಾರದ ಹೆಚ್.ಡಿ ದೇವೆಗೌಡ, ರಾಮಕೃಷ್ಣ ಹೆಗಡೆ ಅವರ ರಾಜಕೀಯ ಪ್ರಭಾವಕ್ಕೊಳಗಾಗಿ ಬಸವಕಲ್ಯಾಣ ವಿಧಾನಸಭೆಯತ್ತ ನಡೆದು ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಚುನಾವಣೆ ಸ್ಪರ್ಧಿಸಿ ಸೊಲು ಅನುಭವಿಸಿದ್ದರು.
ಸತತ ರಾಜಕೀಯ ಸೋಲು ಕಂಡ ಇವರು, ಹಣಕಾಸಿನ ತೊಂದರೆಗೆ ಒಳಗಾಗಿ 10 ವರ್ಷಗಳ ಕಾಲ ಸಂಕಷ್ಟ ಎದುರಿಸಿ ನಂತರ 90 ರ ದಶಕದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಮಾಜಿ ಸಿಎಂ ಎಸ್.ಎಂ ಕೃಷ್ಣ ಹಾಗೂ ದಿ. ಧರಂಸಿಂಗ್ ಅವರ ಸಾಥ್ ಪಡೆದುಕೊಂಡರು. 2000 ರಲ್ಲಿ ರಾಷ್ಟ್ರೀಯ ಸಾಕ್ಷರತಾ ಮಿಷನ್ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ಬಿ.ನಾರಾಯಣರಾವ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನು ತಮ್ಮ ಕ್ಷೇತ್ರದ ಉಜಳಂಬ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ದುಡಿದಿದ್ದರು. ಅಲ್ಲದೆ, ಬಸವಕಲ್ಯಾಣದಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋ.ರು ಚನ್ನಬಸಪ್ಪ ಅವರ ವರದಿಯಂತೆ 600 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಅನುಭವ ಮಂಟಪ ನಿರ್ಮಾಣಕ್ಕಾಗಿ ಹಣ ಬಿಡುಗಡೆ ಮಾಡುವ ಉದ್ದೇಶದಿಂದ ನಾರಾಯಣರಾವ್ ಅವರು ಸರ್ಕಾರದ ಗಮನ ಸೆಳೆಯುವಲ್ಲಿ ಮುಂಚೂಣಿಯಲ್ಲಿದ್ದರು.
ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಅವಿಶ್ವಾಸ ಮಂಡನೆ ಮಾಡಿದಾಗ ವಿಧಾನಸೌಧದಲ್ಲಿ ಬಿ.ನಾರಾಯಣರಾವ್ ಮಾತನಾಡಿದ್ದರು. ಹಣಕ್ಕಾಗಿ ಶಾಸಕರು ಮಾರಾಟವಾಗ್ತಿದ್ದಾರೆ ಎಂದು ಜನ ಮಾತಾಡಿಕೊಳ್ತಿದ್ದಾರೆ ನಮ್ಮ ಮರ್ಯಾದೆ ಉಳಿಸಿಕೊಳ್ಳಬೇಕಿದೆ ಎಂದು ಗಂಭೀರವಾದ ವಿಷಯವನ್ನು ಸದನಕ್ಕೆ ತಿಳಿಸಿದ್ದರು.