ಬಸವಕಲ್ಯಾಣ(ಬೀದರ್): ನಗರದ ಬಸ್ ನಿಲ್ದಾಣದಿಂದ ನಾರಾಯಣಪುರ ಕ್ರಾಸ್‌ವರೆಗೆ ನಿರ್ಮಿಸಲಾಗುತ್ತಿರುವ ಚರಂಡಿ ಮಾದರಿ(ಯುಟಿಲಿಟಿ ಡಕ್ಟ್) ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಪೌರಾಯುಕ್ತೆ ಮೀನಾಕುಮಾರಿ ಬೋರಾಳಕರ್ ಸೂಚಿಸಿದ್ದಾರೆ.
ಕಳಪೆ ಗುಣಮಟ್ಟದ ಕಾಮಗಾರಿ ನಡೆಸಲಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಅವರು, ಸಂಬಂಧಿತ ಅಭಿಯಂತರ (ಜೆಇ) ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತಗೆದುಕೊಂಡು, ತಕ್ಷಣವೇ ಕಾಮಗಾರಿ ನಿಲ್ಲಿಸುವಂತೆ ತಾಕೀತು ಮಾಡಿದರು.
ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದೆ, ಬಿಳಿ ರೇತಿ ಬದಲಾಗಿ ಜಲ್ಲಿ ಕಲ್ಲಿನ ಸಣ್ಣ ಸಣ್ಣ ಚೂರುಗಳನ್ನು ಬಳಸಲಾಗುತ್ತಿದೆ. ಇದರಿಂದ ನಿರ್ಮಿಸಿದ ಕಾಮಗಾರಿ ಬಹುದಿನಗಳ ಬಾಳಿಕೆ ಬರುವುದಿಲ್ಲ ಎಂದು ಸ್ಥಳದಲ್ಲಿದ್ದ ಯುವಕರು ಆಕ್ಷೇಪ ವ್ಯಕ್ತಪಡಿಸಿದರು.
ರಸ್ತೆ ಮೇಲಿನ ಮಳೆ ನೀರು ಚರಂಡಿಗೆ ಹರಿದು ಹೋಗಲು ಯಾವುದೇ ವ್ಯವಸ್ಥೆ ಮಾಡಲಾಗಿಲ್ಲ. ಕೂಡಲೇ ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಯುವಕರಿಗೆ ಪೌರಾಯುಕ್ತರು ಭರವಸೆ ನೀಡಿದ್ರು.