ಬಸವಕಲ್ಯಾಣ (ಬೀದರ್): ತಮ್ಮ ಖಾಸಗಿ ವಾಹನದ ಮೇಲೆ ಪೊಲೀಸ್ ಫಲಕ ಹಾಕಿ ತರುಗಾಡುತಿದ್ದ ಸಾರಿಗೆ ಇಲಾಖೆ ಅಧಿಕಾರಿ ಪತ್ನಿಯೊಬ್ಬರ ವಾಹನವನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದ ಹರಳಯ್ಯ ವೃತ್ತದ ಬಳಿ ವಾಹನಗಳ ಪರಿಶೀಲನೆ ನಡೆಸುತಿದ್ದ ವೇಳೆ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಪೊಲೀಸ್ ಪದ ದುರ್ಬಳಕೆ ಹಿನ್ನೆಲೆಯಲ್ಲಿ ವಾಹನ ಜಪ್ತಿ ಮಾಡಿಕೊಳ್ಳುವ ಜೊತೆಗೆ ವಾಹನ ಚಾಲಕ ಹಾಗೂ ಅಧಿಕಾರಿ ಪತ್ನಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಹಾರಾಷ್ಟದ ಸೊಲ್ಲಾಪುರ ಸಾರಿಗೆ ಕಚೇರಿಯಿಂದ ಅಗತ್ಯ ಸಾಮಗ್ರಿ ಸರಬರಾಜು ವಾಹನ ಎಂದು ಅನುಮತಿ ಪಡೆದ ಪತ್ರ ಪರಿಶೀಲನೆ ವೇಳೆ ಗಮನಕ್ಕೆ ಬಂದಿದೆ. ಫಾರ್ಚುನರ್ ಕಾರಿಗೆ ಗೂಡ್ಸ್ ವಾಹನ ಅನುಮತಿ ಪಡೆದಿದ್ದು ಮತ್ತಷ್ಟು ಸಂಶಯಕ್ಕೆ ಕಾರಣವಾಗಿದೆ.
ಮೂಲತಃ ಬಸವಕಲ್ಯಾಣ ತಾಲೂಕಿನವರಾಗಿರುವ ಸಂಜಯ ವಾಡಿಕರ್, ಮಹಾರಾಷ್ಟದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಯಾಗಿದ್ದಾರೆ. ಸಂಜಯ ವಾಡಿಕರ್ ಅವರ ಪತ್ನಿ ಶಾಲಿನಿ ವಾಡಿಕರ್ ತಮ್ಮ ಫಾರ್ಚುನರ್ ವಾಹನದ ಮೇಲೆ ಪೊಲೀಸ್ ಎಂದು ಫಲಕ ಹಾಕಿ ನಗರದಲ್ಲಿ ತಿರುಗಾಡುತ್ತಿದ್ದರು.
ಹರಳಯ್ಯ ವೃತ್ತದ ಬಳಿ ವಾಹನ ತಪಾಸಣೆಯಲ್ಲಿ ತೊಡಗಿದ್ದ ನಗರ ಠಾಣೆ ಪಿಎಸ್‌ಐ ಸುನೀಲ ಕುಮಾರ ಅವರು, ವಾಹನ ತಡೆದು ತಪಾಸಣೆ ನಡೆಸಿದ್ದು, ಖಾಸಗಿ ವಾಹನದ ಮೇಲೆ ಪೊಲೀಸ್ ಎಂದು ಬರೆಸಿದ್ದು ಯಾಕೆ ? ಎಂದು ವಾಹನ ಚಾಲಕ ಹಾಗೂ ಶಾಲಿನಿ ವಾಡಿಕರ್ ಅವರಿಗೆ ಪ್ರಸ್ನಿಸಿದ್ದಾರೆ. ಈ ವೇಳೆ ಗಲಿಬಿಲಿಗೊಂಡ ಮಹಿಳೆ, ಪಿಎಸ್‌ಐ ಅವರೊಂದಿಗೆ ವಾಗ್ವಾದಕ್ಕೆ ಕಾರಣವಾಯಿತು.