ಬೀದರ್: ರೋಷಾವೇಷದಲ್ಲಿದ್ದ ಗುಂಪಿನ ಮುಂದೆ ತನ್ನನ್ನು ಕ್ಷಮಿಸಿ ಎಂದು ಕರ್ತವ್ಯನಿರತ ಪೊಲೀಸ್ ಪೇದೆ ಕಾಲಿಗೆ ಬಿದ್ದು ಅಸಹಾಯಕನಾಗಿ ಬೇಡಿಕೊಂಡಿರುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಭಾಲ್ಕಿ ತಾಲೂಕಿನ ಅಂಬೇಸಾಂಗವಿ ಕ್ರಾಸ್ ಬಳಿ ಎರಡು ದಿನಗಳ ಹಿಂದೆ ರಾತ್ರಿ ಗಸ್ತಿನಲ್ಲಿದ್ದ ಹೈವೇ ಪೊಲೀಸ್ ವಾಹನದಲ್ಲಿದ್ದ ಎಎಸ್ಐ ಪಂಡಿತ ಹಾಗೂ ಪೇದೆ ಮಲ್ಲಿಕಾರ್ಜುನ ಹಣಕ್ಕಾಗಿ ಲಾರಿ ಕ್ಲೀನರ್ನನ್ನು ಥಳಿಸಿದ್ದರು ಎನ್ನಲಾಗ್ತಿದೆ. ಇದೇ ವೇಳೆ ಹಿಂಬದಿಯಿಂದ ಬಂದ ಲಾರಿಯೊಂದು ಕ್ಲೀನರ್ ಕಾಲಿನ ಮೇಲೆ ಹರಿದು ಕ್ಲೀನರ್ ಗಂಭೀರವಾಗಿ ಗಾಯಗೊಂಡು ನೆಲಕ್ಕೆ ಬಿದ್ದಿದ್ದನಂತೆ.
ಈ ಘಟನೆಯಿಂದ ಕೆರಳಿದ ಲಾರಿ ಮಾಲೀಕರು ಹಾಗೂ ಕೆಲವರ ಗುಂಪು ಸ್ಥಳಕ್ಕಾಗಮಿಸಿ ಪೊಲೀಸರಿಗೇ ಅವಾಜ್ ಹಾಕಿದ್ದಾರೆ. ಈ ವೇಳೆ ಪೇದೆ ಮಲ್ಲಿಕಾರ್ಜುನ್ ಗುಂಪಿನಲ್ಲಿದ್ದ ವ್ಯಕ್ತಿವೋರ್ವನ ಕಾಲಿಗೆ ಬಿದ್ದು ಈ ವಿಷಯ ಇಲ್ಲಿಗೆ ಬಿಟ್ಟು ಬಿಡಿ. ನಾವು ಬೇಕು ಅಂತ ಏನು ಮಾಡಿಲ್ಲವೆಂದು ಅಂಗಲಾಚಿರುವುದು ವಿಡಿಯೋದಲ್ಲಿದೆ.
ಒಂದೆಡೆ ಪೊಲೀಸರು ಬೆದರಿ ಕ್ಷಮೆ ಕೇಳಿದ್ದರೆ, ಆಕ್ರೋಶಿತರ ಗುಂಪಿನಲ್ಲಿದ್ದವರು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತಂತೆ ಯಾವುದೇ ರೀತಿಯ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ಸಿಕ್ಕಿಲ್ಲ.