ಬೀದರ್: ನಗರದ ಓಲ್ಡ್ ಸಿಟಿಯಲ್ಲಿ 11 ಜನರಲ್ಲಿ ಕೊರೊನಾ ವೈರಸ್ ಸೋಂಕು ದೃಢವಾಗ್ತಿದ್ದಂತೆ ಜಿಲ್ಲಾಡಳಿತ ಈ ಭಾಗವನ್ನು ಸಾರ್ವಜನಿಕ ಸಂಚಾರ ನಿಷೇಧಿತ ಪ್ರದೇಶ ಎಂದು ಮಾಡಿದ ಘೋಷಣೆ ವಿಫಲವಾಗಿದೆ. ಯಾಕಂದ್ರೆ, ಜನರು ಎಂದಿನಂತೆ ರಸ್ತೆಯಲ್ಲಿ ಓಡಾಡುತ್ತಿದ್ದಾರೆ.
ರೆಡ್ ಅಲರ್ಟ್ ಏರಿಯಾದಲ್ಲಿ ಜನಸಂಚಾರ.. ನಗರದ ಉಸ್ಮನಾಗಂಜ್,ಶಹಗಂಜ್,ಗವಾನ್ ಚೌಕ್ ಸೇರಿ ಒಲ್ಡ್ ಸಿಟಿಯ ಭಾಗವನ್ನು ರೆಡ್‌ಝೋನ್ ಎಂದು ಘೋಷಣೆ ಮಾಡಿ ಈ ಪ್ರದೇಶದ ಮೂರು ಕಿಲೋಮೀಟರ್ ಪ್ರದೇಶದಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತವೇ ಸರಬರಾಜು ಮಾಡಲು ಕ್ರಮಕೈಗೊಳ್ಳಲಾಗಿತ್ತು. ಆದರೆ, ಕಳೆದ ಎರಡು ದಿನಗಳ ಕಾಲ ಬಿಗಿಯಾಗಿದ್ದ ಬಂದೋಬಸ್ತ್ ಮೂರನೇ ದಿನವಾದ ಇಂದು ವಿಫಲವಾಗಿರುವುದು ಕಂಡು ಬಂದಿದೆ. ಅಂಬೇಡ್ಕರ್ ವೃತ್ತದಿಂದ ಒಲ್ಡ್ ಸಿಟಿ ಭಾಗದಲ್ಲಿ ಮಹಿಳೆಯರು, ಮಕ್ಕಳು ಬೈಕ್ ಸವಾರರು ರಸ್ತೆಗಿಳಿದಿದ್ದಾರೆ. ಅಲ್ಲಲ್ಲಿ ಇರುವ ಪೊಲೀಸ್ ಸಿಬ್ಬಂದಿ ಕಂಡರೂ ಕಾಣದಂತೆ ಸುಮ್ಮನಾಗಿರುವುದು ಆತಂಕ ಮೂಡಿಸಿದೆ.
ದೆಹಲಿ ಜಮಾತ್ಗೆ ಹೋಗಿ ಬಂದ ಒಟ್ಟು 27 ಜನರ ಪೈಕಿ 11 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲೂ ಒಲ್ಡ್ ಸಿಟಿಯಲ್ಲೇ 9 ಜನ ಸೋಂಕಿತರಿದ್ದಾರೆ. ಇವರ ಸಂಪರ್ಕದಲ್ಲಿರುವ ಒಟ್ಟು 82 ಜನರನ್ನು ಹೊಂ ಕ್ವಾರಂಟೈನ್‌ನಲ್ಲಿಡಲಾಗಿದೆ.