ಬೀದರ್: ಶಂಕಿತ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಯುವಕರಿಗೆ ಕೊರೊನಾ ಸೋಂಕು ಇಲ್ಲವೆಂದು ಆರೋಗ್ಯ ಇಲಾಖೆ ಮೂಲಗಳು ದೃಢಪಡಿಸಿವೆ.
ಬಸವಕಲ್ಯಾಣ ತಾಲೂಕಿನ ಮಂಠಾಳ ಹಾಗೂ ಕಿಟ್ಟ ಗ್ರಾಮದ ಇಬ್ಬರು ಯುವಕರಲ್ಲಿ ಕೊರೊನಾ ಜ್ವರದ ಶಂಕೆ ಹಿನ್ನೆಲೆಯಲ್ಲಿ, ನಗರದ ಸರ್ಕಾರಿ ಆಸ್ಪತ್ರೆಯ ವಿಶೇಷ ನಿಗಾ ಘಟಕದಲ್ಲಿ ದಾಖಲಿಸಿ ಪರೀಕ್ಷೆಗಾಗಿ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇಂದು ಪ್ರಯೋಗಾಲಯದ ವರದಿ ಕೈ ಸೇರಿದ್ದು, ಆಸ್ಪತ್ರೆಗೆ ದಾಖಲಾದ ಇಬ್ಬರು ಯುವಕರ ವರದಿ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಖಚಿತಪಡಿಸಿವೆ.
ಕೊರೊನಾ ಶಂಕೆ ಹಿನ್ನೆಲೆಯಲ್ಲಿ, ಈ ಇಬ್ಬರು ಯುವಕರನ್ನು ಕಳೆದ ಐದು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ತಾಲೂಕಿನಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವರದಿ ನೆಗಟಿವ್ ಬಂದಿದ್ದರಿಂದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.