ಬಸವಕಲ್ಯಾಣ: ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ನಾಹೀದಾ ಸುಲ್ತಾನ್ ಅಧ್ಯಕ್ಷೆಯಾಗಿ ಹಾಗೂ ಉಪಾಧ್ಯಕ್ಷೆಯಾಗಿ ಮೀನಾ ಘೋಡಬೊಲೆ ಅಯ್ಕೆಯಾಗಿದ್ದಾರೆ.
ಇಲ್ಲಿಯ ನಾರಾಯಣಪೂರ ಕ್ರಾಸ್ ಬಳಿ ಇರುವ ನಗರಸಭೆ ನೂತನ ಕಚೇರಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಫಲಿತಾಂಶವನ್ನು ಚುನಾವಣಾಧಿಕಾರಿ ಭುವನೇಶ ಪಾಟೀಲ್, ಪೌರಾಯುಕ್ತ ಗೌತಮ್ ಕಾಂಬಳೆ ಪ್ರಕಟಿಸಿದರು. ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್‌ನ-19, ಬಿಜೆಪಿ-5, ಜೆಡಿಎಸ್-3, ಎಂಐಎಂ ಪಕ್ಷದ 3 ಹಾಗೂ ವೆಲ್ಪೇರ್ ಪಾರ್ಟಿಆಫ್ ಇಂಡಿಯಾ ಒಬ್ಬರು ಸದಸ್ಯರನ್ನು ಹೊಂದಿತ್ತು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದರೆ, ಉಪಾಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಾಗಿತ್ತು. ಒಟ್ಟು 31 ಸದಸ್ಯ ಬಲದ ನಗರ ಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತವಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಸದಸ್ಯೆ ನಾಹೀದಾ ಸುಲ್ತಾನ್ ಅವರನ್ನು 26 ಜನ ಸದಸ್ಯರು ಬೆಂಬಲಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಜ್ಯೋತಿ ರೇವಣಸಿದ್ದಯ್ಯ ಅವರನ್ನು ಸಂಸದ ಭಗವಂತ ಖೂಬಾ ಹಾಗೂ ಪಕ್ಷದ 5 ಸದಸ್ಯರು ಸೇರಿ 6 ಸದಸ್ಯರು ಬೆಂಬಲಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಎಂಐಎ ಸದಸ್ಯೆ ಮೀನಾ ರಾಮ್ ಘೋಡಬೊಲೆ ಅವರಿಗೆ 24 ಸದಸ್ಯರ ಬೆಂಬಲ ಸಿಕ್ಕರೆ, ಪ್ರತಿಸ್ಪರ್ಧಿ ಬಿಜೆಪಿಯ ಲಲಿತಾಬಾಯಿ ಅವರಿಗೆ (ಎಂಪಿ ಸೇರಿ) 7 ಜನ ಸದಸ್ಯರ ಬೆಂಬಲ ದೊರೆಯಿತು. ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ವೇಳೆ ಹಿರಿಯ ಸದಸ್ಯ ರವೀಂದ್ರ ಗಾಯಕವಾಡ ಯಾರಗೂ ಬೆಂಬಲಿಸದೆ ತಟಸ್ಥರಾಗಿ ಉಳಿದುಕೊಂಡರು. ನಗರಸಭೆಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನ ಅನಾಯಾಸವಾಗಿ ದಕ್ಕಿದೆ. ಆದರೆ ಉಪಾಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆ ಮೀಸಲಿದ್ದು, ಈ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ ಅಭ್ಯರ್ಥಿ ಇಲ್ಲದಿರುವದು ಉಪಾಧ್ಯಕ್ಷ ಸ್ಥಾನ ಬೇರೆ ಪಕ್ಷದ ಪಾಲಾಗಿದೆ.
ನಗರಸಭೆಯ 31 ಸ್ಥಾನಗಳ ಪೈಕಿ 19ರಲ್ಲಿ ಗೆಲುವು ಸಾಧಿಸುವ ಮೂಲಕ ದಶಕದ ನಂತರ ನಗರಸಭೆಯಲ್ಲಿ ಕಾಂಗ್ರೆಸ್ ಪೂರ್ಣ ಬಹುಮತ ಪಡೆದುಕೊಂಡಿದೆ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕಟವಾಗುತ್ತಿದ್ದಂತೆ ಕಾರ್ಯಕರ್ತರು ಮತ್ತು ಬೆಂಬಲಿಗರು ಅವರನ್ನು ಸನ್ಮಾನಿಸಿದರು. ಪಟಾಕಿ ಸಿಡಿಸಿ, ಪರಸ್ಪರ ಸಹಿ ಹಂಚಿ ಸಂಭ್ರಮಿಸಿದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಂತರ ನಡೆದ ಮೆರವಣಿಗೆ ವೇಳೆ ಪಕ್ಷದ ಕಾರ್ಯಕರ್ತರಿಂದ ಕಾಂಗ್ರೆಸ್ ಪಕ್ಷ ಹಾಗೂ ದಿ.ಶಾಸಕ ಬಿ. ನಾರಾಯಣರಾವ್ ಅವರ ಹೆಸರಲ್ಲಿ ಘೋಷಣೆ ಕೂಗಲಾಯಿತು.
ಕೊನೆ ಘಳಿಗೆಯಲ್ಲಿ ಎಂಐಎಂಗೆ ಬೆಂಬಲ: ನಗರಸಭೆಯಲ್ಲಿ ಪೂರ್ಣ ಪ್ರಮಾಣದ ಬಹುಮತ ಸಾಧಿಸಿದರೂ ತಮ್ಮ ಪಕ್ಷದಲ್ಲಿ ಉಪಾಧ್ಯಕ್ಷೆ ಸ್ಥಾನಕ್ಕೆ ಅರ್ಹ ಅಭ್ಯರ್ಥಿ ಇಲ್ಲದಿರುವ ಕಾರಣ ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆ ಪ್ರಕ್ರಿಯೆಯಿಂದ ದೂರವಿರಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ ಕೊನೆ ಘಳಿಗೆಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಅವರ ನಿರ್ದೇಶನದ ಮೇರೆಗೆ ಎಂಐಎಂ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲಾಯಿತು ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.