ಬಸವಕಲ್ಯಾಣ(ಬೀದರ್): ಕೊರೊನಾ ಹಿನ್ನೆಲೆ ನಾವೆಲ್ಲರೂ ಮನೆಯಲ್ಲಿದ್ದರೆ ಪೌರ ಕಾರ್ಮಿಕರು ಮಾತ್ರ ನಗರದ ಸ್ವಚ್ಛತೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆ ನಗರಸಭೆ ಸದಸ್ಯೆಯೊಬ್ಬರು ಪುಷ್ಪವೃಷ್ಟಿ ಮಾಡಿ, ಆರತಿ ಬೆಳಗಿ ಗೌರವಿಸಿದ್ದಾರೆ.
ಕೊರೊನಾ ಭೀತಿ ನಡುವೆಯೂ ಸ್ವಚ್ಛತೆಗಾಗಿ ಪೌರ ಕಾರ್ಮಿಕರು ಶ್ರಮಿಸುತ್ತಿರುವುದನ್ನು ಮನಗಂಡ ನಗರಸಭೆಯ ಸದಸ್ಯೆ ಸುನೀತಾ ಸಂಜಯಸಿಂಗ್ ಹಜಾರಿ, ಪ್ರತಿಯೊಬ್ಬ ಪೌರಕಾರ್ಮಿಕರ ಮೇಲೆ ಪುಷ್ಪವೃಷ್ಟಿ ಮಾಡಿ, ಶ್ರಮಜೀವಿಗಳಿಗೆ ಗೌರಪೂರ್ವಕವಾಗಿ ಅರತಿ ಬೆಳಗಿದರು. ಜತೆಗೆ ಹಣ್ಣುಗಳನ್ನು ವಿತರಿಸಿದರು.
ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಜನರು ಮನೆಯಿಂದ ಹೊರಗೆ ಬರುವಂತಿಲ್ಲ. ಆದರೂ ನಸುಕಿನ ಜಾವದಲ್ಲಿ ರಸ್ತೆಗೆ ಬಂದು ಕರ್ತವ್ಯ ನಿಷ್ಠೆಯಿಂದ ನಗರದ ಸ್ವಚ್ಛತೆಯ ಕಾರ್ಯದಲ್ಲಿ ತೊಡಗುವ ನಿಮ್ಮ ಸೇವೆ ಮಹತ್ವದ್ದು ಮತ್ತು ಅಭಿನಂದನಾರ್ಹವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.